ಓ ನನ್ನ ಚೇತನಾ...
ಬಸ್ಸಿನ ಹೆಂಗಸು ಮತ್ತು ಬಿಳಿಬಿಳೀ ಸೀರೆಯ ಹುಡುಗಿಯರು…
ಬೆಂಗಳೂರಿಂದ ಹೊರಟು ಹೊಸಕೋಟೆ ಸ್ಟಾಪಲ್ಲಿಳಿದಾಗ ನೀಲಿ ಕಲರಿನ ಸ್ವಾಗತ್ ಬಸ್ಸು ರೊಂಯ್… ರೊಂಯ್ಯ್ಯ್ಯ್ ಅಂತ ಸದ್ದು ಮಾಡುತ್ತ, ಇನ್ನೇನು ನೀ ಬರುವುದರಳೊಗೆ ಹೊರಟೇಬಿಟ್ಟೆ ಅಂತ ಹೆದರಿಸ್ತ ನಿಂತಿತ್ತು. ಟಾಕೀಸಿನೆದುರು ದೊಂಬರಾಟದ ಮಜ ತೊಗೊಳ್ತ ಹೆಜ್ಜೆಯೆಣಿಸ್ತಿದ್ದವಳಿಗೆ ಅದು ಕಂಡು ಎದ್ದೆನೋ ಬಿದ್ದೆನೋ ಅಂತ ದಾಪುಗಾಲುಹಾಕಿ ನಡೆದೆ, ಮತ್ತೆ ನೂರಾ ಅರವತ್ತೇಳನೇ ಸಾರ್ತಿ ಮೋಸ ಹೋಗಿದ್ದೆ!
ಮತ್ತಿನ್ನೇನು!? ಹಾಗೆ ಹೊಸಕೋಟೆಯಿಂದ ಹೊರಡುವ ಪ್ರತಿ ಬಸ್ಸೂ ಸ್ಟಾರ್ಟ್ ಮಾಡಿಕೊಂಡಾದಮೇಲೂ ಅರ್ಧ ಗಂಟೆ ಕಾದು ತನ್ನ ಟಾಪು ಭರ್ತಿಯಾಗುವ ತನಕವೂ ನಿಂತಿರುತ್ತದೆ ಅನ್ನೋದು ಗೊತ್ತಿದ್ದೂ….
ಆ ಬೆಳಗಿನ ಒಂಬತ್ತು ಗಂಟೆಗೇ ಬಸ್ಸು ಹುಳ್ಳಗಾಗಿತ್ತು. ಒಂಥರಾ ಹಾಳಾದ ಹುಳಿ ಮಜ್ಜಿಗೆ ವಾಸನೆ. ದೊಗಲೆ ಡ್ರಾಯರ್ರು ಹಾಕಿ ಅದು ಕಾಣುವಷ್ಟು ಮೇಲೆ ಲುಂಗಿ ಎತ್ತಿ ಕಟ್ಟಿ, ಹೆಗಲ ಮೇಲೊಂದು ಶಾಲು, ಟವೆಲು… ಅವರವರ ಅಂತಸ್ತಿಗೆ ತಕ್ಕ ಹಾಗೆ. ಅದಾಗಲೇ ಒಂದಷ್ಟು ತಾವೂ ಹುಳ್ಳಗಾಗಿ ಬೀಡಿ ಸೇದುತ್ತಲೋ ನಶ್ಯ ನುರಿಯುತ್ತಲೋ ಬಸ್ಸು ಹೊರಡೋದನ್ನೇ ಕಾಯುತ್ತ ಬಸ್ಸಿನ ತುಂಬ ಚಡಪಡಿಸ್ತಿದ್ದರು ಒಂದಷ್ಟು ಗಂಡಸರು.
ಝರಿಝರಿಯ ಸೀರೆ ಉಟ್ಟು, ಬಾಯಿ ತುಂಬ ತಂಬಾಕು- ಎಲೆ ತುಂಬಿಕೊಂಡು ಕಚಪಚ ಮಾಡುತ್ತ ಬಸ್ಸು ಊರು ಮುಟ್ಟೋದು ತಡವಾದಷ್ಟೂ ಚೆನ್ನ ಅಂತ ಹಾರೈಸ್ತ ಕೂತಿದ್ದರು ಹೆಂಗಸರು.
ಅವರೆಲ್ಲರ ನಡುವೆ ಕಿಸಿಕಿಸಿ ಅನ್ನುತ್ತ ಕಂಡಕ್ಟರನ ಕಟಾಕ್ಷಕ್ಕೆ ಪೈಪೋಟಿ ನಡೆಸ್ತಿದ್ದ ಹರೆಯದ ಒಂದಷ್ಟು ಹೆಣ್ಣುಗಳು. ಇವೆಲ್ಲವನ್ನೂ ಮೀರಿ, ಡ್ರೈವರನ ಪಕ್ಕದ ಮೂಲೆಯಲ್ಲೊಂದು ಭಾರೀ ಸೈಜಿನ ಟೀವಿ ಅಲ್ಲಿದ್ದವರೆಲ್ಲರನ್ನೂ ಒಟ್ಟಾಗಿ ಸೆಳೆಯುತ್ತಿತ್ತು. ಅದರಲ್ಲೊಂದು ತೆಲುಗು ಸಿನೆಮಾ. ದಪ್ಪಕೆ ತೀಡಿದ ಹುಬ್ಬಿನ ಹೀರೋ ಹೀರೋಇನ್ನಿನ ಕೆನ್ನೆ ತಿನ್ನುತ್ತಿದ್ದ. ನೋಡುತ್ತ ಕುಂತಿದ್ದ ಹೆಂಗಸರೆಲ್ಲ ‘ಅಯ್ಯಾ…. ತಗಿ ತಗೀ… ’ ಅನ್ನುತ್ತಲೇ ಎಲೆಯಡಿಕೆ ಜಗಿತದ ವೇಗ ಹೆಚ್ಚಿಸ್ಕೊಂಡು ಮುಸಿನಗತೊಡಗಿದರು. ಅವರ ಸಂಕೋಚಕ್ಕೆ ಸವಾಲಾಗಿ ಬಸ್ಸಿನ ಬಾರು ಹಿಡಿದು ನೇತಾಡ್ತಿದ್ದ ಹುಡುಗರು ಪೋಲಿ ಪೋಲಿ ತೆಲುಗು ಡೈಲಾಗು ಹೊಡೆಯುತ್ತ ವಾತಾವರಣವನ್ನ ಮತ್ತಷ್ಟು ನಶೀಲಾ ಆಗಿಸತೊಡಗಿದರು. ಇವೆಲ್ಲದರ ಮಧ್ಯೆ ಬಸ್ಸು ಹೊರಟಿದ್ದೇ ಯಾರ ಗಮನಕ್ಕೂ ಬರಲಿಲ್ಲ!
ಬಸ್ಸು ತೆವಳುತ್ತ ನಿಲ್ಲುತ್ತ ಏದುಸಿರು ಬಿಡುತ್ತ ಹೋಗುತ್ತಲೇ ಇತ್ತು. ನಡುವಲ್ಲೊಂದು ಯನಗುಂಟೆ ಸ್ಟಾಪು. ಅಲ್ಲಿ ಸುಮಾರು ಎಂಟು- ಹತ್ತು ವಡ್ಡರ ಹೆಂಗಸರು ಹತ್ತಿಕೊಂಡರು. ಅವರೊಳಗೊಬ್ಬ ದುಂಡುದುಂಡನೆಯ ಹೆಣ್ಣು. ಹರಿದ ಉದ್ದನೆ ಜಾಕೀಟಿನ ಕೆಳಗೆ ಎಂಥದೋ ಬಗೆಯ ಲಂಗ ಹಾಕಿದ್ದಳು. ಅವಳು ಬಂದು ನಿಂತಿದ್ದೇ ಹೆಂಡದ ಮತ್ತಲ್ಲಿ ತೇಲಾಡ್ತಿದ್ದ ಕೆಲವರಿಗೆ ಏನೋ ಹುಕ್ಕಿ ಬಂದ ಹಾಗಾಯ್ತು. ಅವಳ ಹಿಂದಿನ ಸೀಟಿಗೆ ಆತುಕೊಂಡು ನಿಂತಿದ್ದ ಮುದುಕ ಮುಂದೆ ಬಂದು ಹೆಚ್ಚೂ ಕಡಿಮೆ ಅವಳಿಗೆ ಅಂಟಿಕೊಂಡೇ ನಿಂತ. ಬಹುಶಃ ಅವನ ಕೈ ಎಲ್ಲೆಲ್ಲೋ ತಡಕಾಡಿರಬೇಕು… “ಏ ಥೂತ್….” ಅಂತ ಅವಳು ಕ್ಯಾಕರಿಸಿ ಉಗಿದಿದ್ದು ಸ್ವಲ್ಪ ಮುಂದೆ ಕುಂತಿದ್ದ ನನ್ನ ವರೆಗೂ ಸಿಡಿಯಿತು.
ಅವಳ ಉಗಿತ ಅವನಿಗೆ ಮತ್ತಷ್ಟು ಹುರುಪು ತುಂಬಿರಬೇಕು, ಎಲ್ಲರೆದುರೇ ತನ್ನ ಲೀಲೆಗೆ ಶುರುವಿಟ್ಟ. ಹೌದು… ಎಲ್ಲರೆದುರೇ!!
ಬಸ್ಸಲ್ಲಿ ಕುಂತಿದ್ದವರೆಲ್ಲರೂ ನಾನೂ ಅದನ್ನ ನೋದಿಯೂ ನೋಡದವರಂತೆ ಇದ್ದುಬಿಟ್ಟಿದ್ದೆವು. ಆ ಹೆಂಗಸು “ತೆಗೆಯಲಾ ಮಾದರ್ ಛೋತ್…” ಅಂತೆಲ್ಲ ಅನ್ನುತ್ತ ಕೊಸರಾಡ್ತಲೇ ಇದ್ದಳು. ಅಂವ ಕೊನೆಗೂ ಏನೂ ಮಾಡಲಾಗದೆ ಸುಸ್ತು ಹೊಡೆದು ಅತ್ತಿಬೆಲೆಯಲ್ಲಿ ಇಳಿಯಹೊರಟಾಗ ‘ಮಡಗಲಾ ದುಡ್ನ’ ಅಂತ ಕಂಕುಳಲ್ಲಿ ಅವನ ಕುತ್ತಿಗೆ ಅವುಚಿ ನಿಂತುಬಿಟ್ಟಳು!
ಇವೆಲ್ಲ ರಂಪಾಟ ಮುಗಿಯುವ ಹೊತ್ತಿಗೆ ಕೆಯಿಬಿಯೆದುರು ಬಸ್ಸು ನಿಂತು ನಾನು ಇಳಿದುಕೊಂಡೆ. ಅಲ್ಲಿ ನನಗಾಗಿ ಕಾದು ನಿಂತಿದ್ದ ಬಿಳಿ ಪಂಚೆ ಹುಡುಗರು, ಸೀರೆ- ತುರುಬಿನ ಹೆಂಗಸರು, ಮನೆಯೊಳಗಿಂದ ತೇಲಿ ಬರುತ್ತಿದ್ದ ಧೂಪದ ಘಮ, ಅಂಗಳದ ಹಾದಿಯುದ್ದಕ್ಕೂ ನೆಟ್ಟಿದ್ದ ಧ್ಯೇಯ ವಾಕ್ಯಗಳು…. ಇವೆಲ್ಲವೂ ಟೀವಿಯಲ್ಲಿ ತೋರುವ ಹಾಗೆ ಕಾಣತೊಡಗಿ, ಬರೀ ಬಸ್ಸಿನ ತುಂಬ ತುಂಬಿದ್ದ ಜನರೇ ಸುತ್ತ ಮುತ್ತ ಆವರಿಸತೊಡಗಿದರು. ನನ್ನದೇ ಒಂದು ಚಿಕ್ಕ ಕೋಟೆ ಕಟ್ಟಿಕೊಂಡು ಜಗತ್ತೆಲ್ಲ ಅದರಲ್ಲೇ ಇದೆ ಅಂದುಕೊಂಡಿದ್ದ ಭ್ರಮೆ ಕಳಚತೊಡಗಿತು.
ಒಳಗೆಲ್ಲೋ ಅಮ್ಮನ ದನಿ ಜೋರಾಗಿ ಕೇಳ್ತಿತ್ತು. “ಹಾಲು ಕರಿಯೋ ಮೊದಲು ಕೊಟ್ಟಿಗೆ ತೊಳೀಬೇಕು… ಓಹೋ…!! ಮೈಕೈ ಕೊಳೆಯಾಗದ ಕೆಲಸಕ್ಕೆ ಬಂದ್ಬಿಡ್ತಾರೆ ಇವ್ರು!”
ಹೌದಲ್ಲ!?
ಹಾಲು ಕರೆಯುವ ಮೊದಲು ಕೊಟ್ಟಿಗೆ ಗುಡಿಸಬೇಕು. ಆದರೆ, ಪೊರಕೆ ಎಲ್ಲಿದೆ!?
(ಇದು ಕೆಂಡ ಸಂಪಿಗೆಗಾಗಿ ಬರೆದಿದ್ದು)

ಹೀಗೇ ಮೂರು, ವೇದದ ಚೂರು
ಏಕೋಹಮ್ ಬಹುಷ್ಯಾಮ…
ಅಲ್ಲಿ ಏನೂ ಇರಲಿಲ್ಲ.
ಇರಲಿಲ್ಲವೆಂದರೆ, ಇತ್ತು…
ಹಾಗೆ ‘ಇದೆ’ ಎನ್ನಲು ಮತ್ತೊಂದು
ಜೊತೆಗಿರಲಿಲ್ಲ.
ಹಾಗೆ ಇದ್ದದ್ದು ಅಗಾಧವಾಗಿತ್ತು.
ಏನಿದ್ದರೇನು? ಒಂಟೊಂಟಿಗೆ
ಬೆಲೆಯಿಲ್ಲವೆನ್ನುವುದು ಅದಕ್ಕೆ ಗೊತ್ತಾಯ್ತು.
ತಿಳಿವಿಗೆ ಬಿರಿದು ಚೂರಾಯ್ತು.
ಪ್ರತಿ ಚೂರಲ್ಲೂ ತಾನೇ ತಾನಾಗಿ ತಾನೇ ತಾನಾಗಿ ತಾನೇ ತಾನಾಗಿ…
ಚೂರಿನ ಚೂರಿನ ಚೂರಿನ…. ಚೂರು ತನ್ನನ್ನೇ ತಾನು ಮರೆತು,
ಜಗತ್ತು,
ಜೀವದಿಂದ ತುಂಬಿಕೊಂಡಿತು.
~
ತತ್ ತ್ವಮ್ ಅಸಿಬಣ್ಣವಿಲ್ಲ, ರುಚಿಯಿಲ್ಲ, ಆಕಾರವಿಲ್ಲ.
ತ್ರೀ ರೋಸಸ್ ಜಾಹೀರಾತಿನ ಸ್ಲೋಗನ್ ಇದಲ್ಲ.
ಯಾಕಂದರೆ,
ಅದೇನಿಲ್ಲದಿದ್ದರೂ ನಿನಗೆ ಶಕ್ತಿಯಿದೆ.
ನಿನ್ನ ಶಕ್ತಿಯ ಬಣ್ಣ ನನ್ನ ಕಣ್ಣಿಗೆ ಮೀರಿ,
ನಿನ್ನ ರುಚಿಯ ಸ್ವಾದ ಸವಿಯಲಾಗದೆ
ನಾಲಗೆಯೆ ಸೋತು,
ನಿನ್ನಾಕಾರವ ತಬ್ಬಲಾಗದ ನಾನು
ಹಾಗಂದದ್ದು ನಿಜ.
ಯಾವುದು ಪಾತ್ರಕ್ಕೆ ಆಕಾರ,
ಬಣ್ಣಕ್ಕೆ ಬಣ್ಣ
ರುಚಿಗೆ ರುಚಿ ಕೊಟ್ಟು
ಭಾವಕ್ಕೆ ಭಕುತಿಗೆ ನಿಲುಕುತ್ತಲಿರುವುದೋ,
ಗೊತ್ತಾಗಿದೆ ನನಗೆ-
ಅದು ನೀನೇ ಆಗಿರುವೆ.
~
ಅಹಂ ಬ್ರಹ್ಮಾಸ್ಮಿಹೆಸರು ಬದಲಿಸಿದೆ,
ಮೂರು ಮೂರು ಬಾರಿ.
ಹೇರ್ ಸ್ಟೈಲು, ಸ್ನೋ- ಶಾಂಪೂ
ಸಾಕಷ್ಟು ಬಾರಿ.
ಮೈ ಚರ್ಮ ಬದಲಾಗಿದೆ
ತಲೆಗೂದಲು ಬದಲಾಗಿದೆ
ಒಳಗೊಳಗಿನ ಒಂದೊಂದು ಜೀವಕೋಶವೂ
ಬಲಿಯಾಗಿದೆ ಕಾಲಕ್ಕೆ.
ಮೂರು ದಶಕದ ಮಹಾನಾಟಕದಲ್ಲಿ
ಒಮ್ಮೊಮ್ಮೆ ಒಂದೊಂದು ರೋಲು
ಬದಲಿಸುತ್ತಲೇ ಬಂದಿರುವೆ ಪ್ರತಿ ಬಾರಿ.
ಆದರೂ,
‘ನಾನು’ ‘ನಾನೇ’ ಆಗಿರುವೆ
ಅಮ್ಮನ ಹೊಟ್ಟೆಯಿಂದೀಚೆ ಬಿದ್ದ ಮಗು,
ಗಿಡ್ಡ ಲಂಗದ ಸ್ಕೂಲಿನ ಮಗು
ತುಂಬು ಸೀರೆಯ ತಾಯಿ- ನನಗೊಂದು ಮಗು!
ನಾನೇ ಆಗಿರುವೆ, ನಾನು ಬದಲಾದರೂ…
ಹೌದು.
ಹೊರಗಿನ ಮುಖ ಧೋಕಾ ನೀಡಿದರೂ
ನನ್ನ ನಾನೇ ಎಂದು
ಪರಿಚಯ ಹೇಳುವುದು
ನನ್ನೊಳಗಿನ ನಾನು.
ನಿತ್ಯ, ಸತ್ಯ, ಶುದ್ಧ, ಮುಕ್ತ
ಅದು-
ನಿಜವಾದ ‘ನಾನು’

ಚೇತನಾ…. ಅನಿಕೇತನ!
ಅದ್ಯಾವ ಘಳಿಗೇಲಿ ಬ್ಲಾಗೋದುಗ ಮಹಾಶಯರೊಬ್ಬರು ‘ಆಗು ನೀ ಅನಿಕೇತನ’ ಅಂತ ಹಾರೈಸಿದ್ರೋ, ಕಾಕತಾಳೀಯವೆನ್ನುವ ಹಾಗೆ ಮೇಲಿನ ಮನೆ ಆಂಟಿ ಕೂಡ ಬೆಳಗಾಗೆದ್ದು “ಪೂಜೀಸಾಲೆನ್ನಿಂದ ವರವೇ ಶ್ರೀ ಗವ್ರೀ ನಿನ್ನಯ ಚರಣಗಳಾ… ಓ ನನ್ನ ಚೇತನಾ, ಆಗು ನೀ ಅನಿಕೇತನಾ… ಹೂವ್ವೂ… ಚೆಲುವೆಲ್ಲಾ ನಂದೆಂದಿತೂ…” ಅಂತ ರಿಮಿಕ್ಸ್ ಹಾಡಲು ಶುರುವಿಟ್ಟರು. ದಿನಾಬೆಳಗೂ ಅವರ ಆರ್ಕೆಸ್ಟ್ರ್‍ಆ ಕೇಳೀ ಕೇಳೀ, ಅದಿಲ್ಲದೆ ಊಟ ನಿದ್ದೆ ಸೇರದೆ ಪುಷ್ಪಕವಿಮಾನದ ಕಮಲ್ ಹಾಸನ್ ಸ್ಥಿತಿ ತಲುಪಿದ್ದ ನನಗೆ ಈ … ಅನಿಕೇತನ… ಎಲ್ಲಿಂದ ಬಂದು ಸೇರ್ಕೊಳ್ತು ಅಂತ ಗಾಬರಿಯಾಗಿದ್ದಂತೂ ಹೌದು. ಕಳೆದೆರಡು ವಾರದಿಂದ ಹೊಸಿಲ ಮುಂದೆ ಚಪ್ಪಲಿ ಬಿಡ್ಬೇಡ, ಸಂಜೆ ಒಂದ್ ದೀಪಾನಾದ್ರೂ ಹಚ್ಚು… ಇತ್ಯಾದಿ ವರಾತ ತೆಗೆದಿದ್ದ ಓನರಾಂಟಿ ಇಂಡೈರೆಕ್ಟಾಗಿ “ಎಲೈ ಚೇತನಾ, ಮನೆ ಬಿಟ್ಟು ಹೋಗು… ಮನೆ ಇಲ್ಲದವಳಾಗು” ಅಂತ ಹೇಳ್ತಿದಾರೇನೋ ಅನ್ನುವ ಗುಮಾನಿ ಕೂಡ ಬಂದ್ಬಿಡ್ತು.
ಸರಿ. ಇನ್ ಹೀಗೇ ಸುಮ್ನೆ ಕುಂತ್ರಾಗಲ್ಲ ಅಂದ್ಕೊಂಡು ಮನೆ ಹುಡುಕೋಕೆ ಶುರುವಿಟ್ಟೆ. ಅದಕ್ಕೆ ಸರಿಯಾಗಿ, ಅದೇನೋ ವರ ಮಹಾ ಲಕ್ಷ್ಮಿ ಪೂಜೆ ದಿನ ಸಂಜೆ ನಾನು ಕಸ ಗುಡಿಸಿದೆ ಅನ್ನೋದೊಂದು ಅಂತಾರಾಷ್ಟ್ರೀಯ ಮಟ್ಟದ ಪ್ರಮಾದವಾಗಿ ಸುತ್ತ ನಾಲ್ಕು ಮನೆ ಹೆಂಗಸರು ಜಗಲಿಯಲ್ಲಿ ಕುಂತು ಸುದೀರ್ಘ ಸಮಾಲೋಚನೆ ಮಾಡೋ ಮಟ್ಟಕ್ಕೆ ಬೆಳೆದುಬಿಟ್ಟಿತ್ತು. ಇದ್ಯಾಕೋ ಕೆಲಸ ಕೆಡ್ತಲ್ಲ ಅಂತ ನಾನು ತಲೆ ಕೆಡಿಸ್ಕೊಂಡು ಕುಂತೆ.

ಮನೆ ಹುಡುಕ್ಬೇಕು ಅಂದ್ರೆ ಈ ಬೆಂಗ್ಳೂರಲ್ಲಿ ‘ಕಾರ್ಯವಾಸಿ ಕತ್ತೆ ಕಾಲು’ ಕಟ್ಬೇಕು (ನಾನು ಬ್ರೋಕರ್ ಗಳನ್ನ ಕತ್ತೆ ಅಂದೆ ಅಂತ ಸೀರಿಯಸ್ಸಾಗಿ ಅಂದ್ಕೋಬೇಡಿ ಪ್ಲೀಸ್…) ಅಲ್ವಾ? ನಾನೂ ಕಟ್ದೆ. ಆ ಪುಣ್ಯಾತ್ಮ ಸ್ಲಮ್ಮಿಂದ ಹಿಡಿದು ಕೊಟ್ಟಿಗೆವರೆಗೂ ( ಅಯ್ಯೋ! ಸಾಮಾಜಿಕ ಅಂತೆಲ್ಲ ಸೀರಿಯಸ್ ಕಮೆಂಟ್ಸ್ ಬೇಡ ಪ್ಲೀಸ್!) ನಲವತ್ ಸಾವ್ರ ಅಡ್ವಾನ್ಸ್, ಮೂರೂ ವರೆ ಬಾಡ್ಗೆ ಅಂತ ಹಲ್ಕಿರೀತ ಓಡಾಡಿಸ್ದ.
ಇನ್ನಿವನ ಸಾವಾಸ ಬೇಡ ಅಂತ ಡಿಸೈಡ್ ಮಾಡ್ಕೊಂಡು ‘ಟು ಲೆಟ್’ ಬೋರ್ಡ್ ಇದ್ದ ಮನೆಗಳ್ಗೆ ಎಡತಾಕತೊಡಗಿದೆ. ಒಂದ್ ವಮ್ಮ ಎಷ್ಟ್ ಜನ ಇರ್ತೀರಿ? ಅಂತು. ‘ಒಬ್ಳೇ’ ಅಂದಿದ್ಕೆ, ಬ್ಯಾಚುಲರ್ರಾ? ಒಂಟಿ ಹೆಣ್ಮಕ್ಳಿಗೆ ಮನೆ ಕೊಡಲ್ಲ ಅಂತ ಓಡಿಸಿಬಿಡ್ತು. ಮತ್ತೊಂದ್ಕಡೆ ‘ನಂಗೆ ಮದ್ವೆ ಆಗಿದೆ, ವರ್ಷಕ್ಕೊಮ್ಮೆ ಮಗು ಬರಬಹುದು, ಆಗೀಗ ಅಣ್ಣ ತಮ್ಮಂದಿರು ಬರ್ತಿರ್ತಾರೆ ಅಂತೆಲ್ಲ ಪ್ರವರ ಒಪ್ಪಿಸ್ದೆ. ಆ ಪುಣ್ಯಾತ್ಗಿತ್ತಿ, ‘ಮದ್ವೆ ಆಗಿ ಎಷ್ಟ್ ವರ್ಷ ಆಯ್ತು? ಒಬ್ಳೇ ಯಾಕಿದಿ? ಬರೋರು ಅಣ್ಣಾ ತಮ್ಮಾನೇ ಆಗಿರ್ತಾರೆ ಅಂತ ಏನ್ ಗ್ಯಾರೆಂಟಿ?’ ಅಂತೆಲ್ಲ ರೇಜಿಗೆ ಹುಟ್ಟಿಸಿಬಿಡ್ತು. ಅವತ್ಯಾಕೋ ಸಹಿಸ್ಲಿಕ್ಕೇ ಆಗ್ಲಿಲ್ಲ ನನ್ ಕೈಲಿ. ನಿಂತಲ್ಲೇ ಒಳಗಿಂದ ಅಳು ಒತ್ತರಿಸ್ಕೊಂಡು ಬರೋದೊಂದು ಬಾಕಿ.
ಒಂಟಿ ಹೆಣ್ಣುಮಕ್ಕಳಿಗೆ ಸಮಾಜ ಅದೆಷ್ಟು ಗೌರವ ಕೊಡತ್ತೆ ನೋಡಿ! ಇಷ್ಟ್ ದಿನ ಯಾರಾದ್ರೂ ಹೆಣ್ಮಕ್ಳು ಸುಯ್ ಸೈಡ್ ಮಾಡ್ಕೊಂಡ್ರೆ ಹೆಡಿಗಳು ಅಂತಿದ್ದೆ. ಪಾಪ. ಅವರಿಗೆ ಬದುಕು ಅದೆಷ್ಟ್ ಬೇಸರ ಬಂದಿರಬಹುದಲ್ಲ ಅನಿಸ್ತಿದೆ ಈಗ. ಇನ್ಮೇಲೆ ನಾನು ಹಾಗೆಲ್ಲ ಬೈಕೊಳೋಲ್ಲ! ( ಹೀಗಂದಾಗ ಅಣ್ಣ, ‘ಮನೆ ಸಿಗ್ಲಿಲ್ಲ ಅಂತ ನೀನೇನಾದ್ರೂ ಸಾಯೋ ಪ್ಲ್ಯಾನಲ್ ಇದ್ರೆ ಹೇಳ್ಬಿಡು ಮಾರಾಯ್ತಿ ಮೊದ್ಲೇ’ ಅಂತ ರೇಗ್ಸಿದ. ಇಲ್ಲಪ್ಪಾ! ನಂಗೆ ಅಷ್ಟೆಲ್ಲ ಧೈರ್ಯ ಇಲ್ಲ!!)
ಇಷ್ಟೆಲ್ಲಾ ಆಯ್ತಾ… ಈಗೇನ್ ಮಾಡೋದು ಅಂತ ಯೋಚ್ನೆ ಆಗ್ತಿದೆ ನಂಗೆ. ಅತ್ಲಾಗಿ ದಿನಾ ಸಂಜೆ ಸುಮ್ನೆ ದೇವ್ರೆದ್ರಿಗೆ ಒಂದ್ ದೀಪ ಹಚ್ಚಿಟ್ಟು ಜೋರು ಜೋರಾಗಿ ಹಾಡು ಹೇಳಲಾ? ಊದುಬತ್ತಿ ಕಟ್ಟು ಹಚ್ಚಿ ಅವರ ಮನೆ ಕಿಟಕಿಯೊಳಗೆ ಹೊಗೆ ತೂರಿಸಿ ನನ್ನ ಸಂಪ್ರದಾಯವಂತಿಕೆ ಸಾಬೀತುಪಡಿಸಲಾ? ಅಥವಾ, ಶುಕ್ರವಾರ ಪೂಜೆ ಮಾಡಿ ಅರಿಷಿಣ ಕುಂಕುಮಕ್ಕೆ ಕರೆದು ಮಸ್ಕಾ ಹೊಡೆಯಲಾ? ನಾನು ಈ ಮನೇಲೇ ಇದ್ಕೊಂಡ್ ಬಿಡ್ತೀನಿ ಅಂತ!?
- ಬಹುಶಃ ಬದುಕು, ಬಂಡೇಳುವತನಕ ಸುಲಭ. ಬಂಡೆದ್ದ ಮೇಲೆ ಕಷ್ಟ.

ಒಂದು ಪೀಠಿಕೆ, ಸಮಜಾಯಿಷಿ, ವರದಿ ಮತ್ತು ವಂದನಾರ್ಪಣೆ
ಪೀಠಿಕೆಗೊಂದು ಕಥೆ…
ಇದು ನಿಜ್ವಾಗ್ಲೂ ನಡೆದ- ಇನ್ನೂ ಪರಿಹಾರ ಕಾಣದಿರುವ ಸಂಗತಿ.
ನನ್ನ ಹಳೆ ಗೆಳತಿಯೊಬ್ಬಳ ಹೆಸರು ಭವ್ಯಾ. ಅವಳ ಗಂಡ ಚಂದನ್. ಅವರಿಬ್ರೂ ಪ್ರೀತಿಸಿ ಮದುವೆಯಾದ್ರು. ಪ್ರೀತಿ ಅಂದ್ರೆ… ಅದೆಂಥದ್ದು ಅಂತೀರಾ!? ಅಂವ ಇದ್ದಿದ್ದು ಮುಂಬಯಿಯಲ್ಲಿ. ಇವಳು- ಇಲ್ಲೇ, ಬೆಂಗ್ಳೂರಲ್ಲಿ. ದಿನಾ ಗಂಟೆಗೊಂದು ಸಾರ್ತಿ ಅಂವ ಇವಳಿಗೆ ಕಾಲ್ ಮಾಡಿ ಕಾಲು ಗಂಟೆಯಾದ್ರೂ ಮಾತಾಡ್ತಿರ್ತಿದ್ದ. ರಾಟ್ರಿಯಂತೂ ನಿದ್ದೆ ಬಿಟ್ಟು ಫೋನಲ್ಲಿ ಹರಟೆ ಕೊಚ್ತಿದರು.
ಸರಿ. ಎರಡೂ ಕಡೆಯವರು ಒಪ್ಪಿ ಖುಶಿಖುಶಿಯಾಗೇ ಮದುವೆ ಮಾಡಿಕೊಟ್ಟರು. ಆದರೆ, ಮದುವೆಯಾದ ಎರಡನೇ ತಿಂಗಳಿಗೇ ಭವ್ಯಾಳ ಕಳೆ ಕುಂದಿಹೋಗಿತ್ತು. ಚಂದನ್ ಕೂದ ಬೆಂಗಳೂರಿಗೇ ಶಿಫ್ಟ್ ಆಗಿದ್ದ. ಅಂವ ಕೂಡ ಗೆಲುವಾಗಿರಲಿಲ್ಲ. ‘ಏನ್ರೋ?’ ಅಂದ್ರೆ, ಇಬ್ಬರೂ ಪ್ರತ್ಯೇಕ ಪ್ರತ್ಯೇಕವಾಗಿ, “ಯಾಕೋ ಕಸಿವಿಸಿ, ಇಬ್ರೂ ಒಟ್ಗೆ ಮನೇಲಿದ್ರೆ ಸಾಕು ಏನಾದ್ರೂ ಒಂದ್ ಜಗಳ ಆಡ್ಕೊಂಡು ಫಜೀತಿ ಮಾಡ್ಕೊಳ್ತೀವಿ. ಆಫೀಸಿಗೆ ಹೋದಾಗ ಫೋನಲ್ಲಿ ಚೆನಾಗೇ ಮಾತಾಡ್ಕೊಳ್ತೀವಿ. ಆದ್ರೆ ಮನೇಲಿ ಒಬ್ರನ್ನ ಒಬ್ರು ಸರಿಯಾಗಿ ಫೇಸ್ ಮಾಡೋಕೇ ಆಗೋಲ್ಲ” ಅಂತ ಹೇಳ್ಕೊಂಡ್ರು.
ಕೌನ್ಸೆಲಿಂಗಿಗೆ ಅಂತ ಅವರಿಬ್ರನ್ನೂ ನಾನು ಗೀತಕ್ಕನ ಬಳಿ ಕರೆದೊಯ್ದೆ. ಅವರು ಎಲ್ಲಾವ್ದನ್ನೂ ಕೇಳಿ, ಒಂದಷ್ಟ್ ದಿನ ಫೋನಲ್ಲಿ ಮಾತಾಡೋದು ನಿಲ್ಸಿ, ಒಬ್ಬರಿಗೊಬ್ರು ಮುಖಾಮುಖಿಯಾಗಿ ಮಾತಾಡೋದನ್ನ ರೂಢಿಸ್ಕೊಳ್ಳಿ ಅಂತ ಸಲಹೆ ಕೊಟ್ರು.
ಇದೆಲ್ಲಾ ಆಗಿ ನಾಲ್ಕು ತಿಂಗಳಾಗ್ತಾ ಬಂತು. ಪರವಾಗಿಲ್ಲ, ಈಗ ಅವರ ಜಗಳ ಕಡಿಮೆಯಾಗಿದೆ. ಮನೇಲಿ ಕೂತು ಹರಟೋದನ್ನ ಅಭ್ಯಾಸ ಮಾಡ್ಕೊಳ್ತಿದಾರೆ…
~
ಸಮಜಾಯಿಷಿ!
ಈಗ್ಯಾಕೆ ಇದನ್ನ ಹೇಳ್ದೆ ಅಂತ ಯೋಚ್ನೆ ಮಾಡ್ತಿದೀರಾ?
ನೆನ್ನೆ (೧೮ ಅಗಸ್ಟ್) ನನ್ನ ಪುಸ್ತಕ ಬಿಡುಗಡೆ ದಿನ ನನ್ನ ಫಜೀತಿ ಹಿಂಗೇ ಆಗಿತ್ತಲ್ವಾ? ಅದ್ಕೆ!
ನಂಗೆ ಸ್ಟೇಜ್ ಮೇಲೆ ಮಾತಾಡೋದೇನೂ ಹೊಸತಲ್ಲ. ಆದ್ರೂ ನೆನ್ನೆ ಯಾವ ಪರಿ ತಡಬಡಾಯಿಸ್ದೆ ಅಂದ್ರೆ, ದೇವಾ! ಬೆಳಗ್ಗೆಯಿಂದ ಅಣ್ಣ ವಿಡಿಯೋ ಕ್ಲಿಪ್ಪಿಂಗ್ ತೋರ್ಸೀ ತೋರ್ಸೀ ಪ್ರಾಣ ಹಿಂಡ್ತಿದಾನೆ!
ಕೊನೆಗೆ, ಅಲ್ಲಿ ಸೇರಿದ್ದ ಬ್ಲಾಗಿಗರನ್ನ, ಬ್ಲಾಗ್ ತಮ್ಮಂದಿರನ್ನಾದ್ರೂ (ವಿಕಾಸ್, ಸುಪ್ರೀ ಇತ್ಯಾದಿ) ನೆಟ್ಟಗೆ ಮಾತಾಡ್ಸಿದ್ನಾ? ಊಹೂಂ… ಅದೂ ಇಲ್ಲ! ಸಮಯಾವಕಾಶ ಆಗ್ಲಿಲ್ಲ ಅನ್ನೋದು ಬೇರೆ ಮಾತು. ಇದ್ದ ಸಮಯದಲ್ಲಾದ್ರೂ ಯಾರೊಟ್ಟಿಗೂ ಬೆರೀಲಿಕ್ಕಾಗ್ಲಿಲ್ಲ
ಕೀಬೋರ್ಡ್ ಕುಟ್ಟಿಕೊಂಡು ಹೀಗೆಲ್ಲ ಸಿಕ್ಕಾಪಟ್ಟೆ ಹರಟುವ ನಾನು ಮುಖಾಮುಖಿಯಾಗಿ ಮಾತಾಡಲಾರೆನೇನೋ ಅನಿಸಿತು. ಆಗ ಭವ್ಯಾ ಕಥೆ ನೆನಪಾಯ್ತು. ಇಷ್ಟೂ ದಿನ ನಿಮ್ಮೊಟ್ಟಿಗೆ ಬರೀ ಕಂಪ್ಯೂಟರಲ್ಲಿ ಹರಟಿದ್ದರ ಪರಿಣಾಮವೇನೋ ಇದು? ಟೀನಾ ಬಹಳ ಮುಂಚೆಯೇ ಸಿಕ್ಕು, ಗೆಳತಿಯಾಗಿದ್ದಳು ಅನ್ನುವ ಒಂದೇ ಕಾರಣಕ್ಕೆ ಬಹುಶಃ ಅವಳೊಂದಿಗೆ ನನಗೆ ಮಾತು ಸಾಧ್ಯವಾಗುತ್ತದೆ.
~
ಕಾರ್ಯಕ್ರಮ ವರದಿ
‘ಭಾಮಿನಿ ಷಟ್ಪದಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಬಹಳ ಚೆನ್ನಾಗಿ ನಡೀತು. ಜಿ.ಎನ್. ಮೋಹನ್ ಬಹಳ ವಿಭಿನ್ನವಾಗಿ ಅದನ್ನ ಅಯೋಜಿಸಿದ್ದರು. ನನ್ನ ‘ಭಾಮಿನಿ’, ಕುಂಭ ಸಂಭವೆಯಾಗಿ ಹೊರಹೊಮ್ಮಿದಳು. ಅಂದರೆ, ಡಾ.ವಿವೇಕ್ ರೈ ಅವರು ಪುಸ್ತಕವನ್ನು ಮಡಿಕೆಯಿಂದ ಹೊರತೆಗೆಯುವ ಮೂಲಕ ಬಿಡುಗಡೆ ಮಾಡಿದರು. ‘ಚಿತ್ತಾರ’ದಿಂದ ಅಲಂಕೃತವಾಗಿದ್ದ ಕುಡಿಕೆಗಳು ಸ್ಟೇಜನ್ನು ಅಲಂಕರಿಸಿದ್ದವು.
ಬ್ಯಾಕ್ ಡ್ರಾಪಿನಲ್ಲಿ ಮೀಸೆ ಬರೆಸಿಕೊಳ್ತಿದ್ದ, ಬರೀತಿದ್ದ ಹುಡುಗಿಯರಿದ್ದರು. ನನ್ನ ಅಪ್ಪ ಅಮ್ಮ ಕೂಡ ಒಂದು ಸಲ ಅದು ನನ್ನದೇ ಚಿಕ್ಕಂದಿನ ಫೋಟೋ ಅಂದ್ಕೊಂಡು ಬೇಸ್ತು ಬೀಳುವಷ್ಟು ಆ ಮೀಸೆಯ ಹುಡುಗಿಗೆ ನನ್ನ ಹೋಲಿಕೆ ಇತ್ತು. ಆದರೆ ಅದು ನಾನು ಖಂಡಿತಾ ಅಲ್ಲ ಅನ್ನೋದು ನನ್ನ ಕ್ಲಾರಿಫಿಕೇಶನ್ನು. ಫೋಟೋ ತೆಗೆದ ಮಲ್ಲಿಕಾರ್ಜುನರಿಗೆ ಜಯವಾಗಲಿ!
ಪುಸ್ತಕದ ಬಗ್ಗೆ ಬಸವರಾಜು ಅವ್ರು ಮಾತಾಡ್ತಾ ಸ್ವಲ್ಪ ಶೈಲಿ ಬದಲಾಯಿಸೋದಕ್ಕೆ ಗಂಡಸರ ಕಷ್ಟ ಸುಖಗಳನ್ನೂ ಬರೆಯೋದಕ್ಕೆ ಪ್ರಯತ್ನಪಡಿ ಅಂದ್ರು. ‘ಜೀವ ದನಿ’ ಬ್ಲಾಗಿನಲ್ಲಿ ನನ್ನಣ್ಣ ‘ಗಂಡಸರ ಗೋಳು’ ಅಂತ ಬರೀತಿದ್ದ. ಸಮಯ ಸಾಲದೆ ಅದನ್ನ ನಿಲ್ಲಿಸಿಬಿಟ್ಟ, ಆ ಬ್ಲಾಗಿನ ಗೆಳೆಯರು ಬ್ಲಾಗನ್ನೇ ನಿಲ್ಲಿಸಿಬಿಟ್ಟರು. ಅವನು ಶುರು ಮಾಡಿದ್ದನ್ನ ಮುಂದುವರೆಸೋ ಪ್ರಯತ್ನ ಖಂಡಿತ ಮಾಡ್ತೇನೆ!
ವಿವೇಕ್ ರೈ ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿದರು. ಆ ಕೃತಿ ಬೇರೆ ಯಾರದ್ದೋ ಆಗಿದ್ದರೆ ಬಹಳ ಮುಕ್ತ ಮನಸಿನಿಂದ ಅವರ ಮಾತನ್ನ ಎಂಜಾಯ್ ಮಾಡ್ತಿದ್ದೆನೇನೋ? ಆದರೆ ಅದು ನನ್ನದೇ ಆಗಿದ್ದರಿಂದ ಬಹಳ ಮುಜುಗರದಿಂದ ಕುಳಿತಿದ್ದೆ ನಾನು.
ಟೀನಾ ನನ್ನ ಬರಹ ಸಾಮರ್ಥ್ಯ ಕೇವಲ ‘ಭಾಮಿನಿ ಷಟ್ಪದಿ’ಗೆ ಮಾತ್ರ ಸೀಮಿತವಲ್ಲ ಅಂತ ಸರಿಯಾಗಿಯೇ ಗುರುತಿಸಿದ್ಲು. ನಂಗೂ ಕೂಡ ಬರೀ ಅದಕ್ಕೇ ಬ್ರ್ಯಾಂಡ್ ಆಗುವ, ಸೀಮಿತವಾಗುವ ಇರಾದೆ ಏನೂ ಇಲ್ಲ.
ಮೋಹನ್ ಅವರ್ ಕ್ರಿಯೇಟಿವಿಟಿ, ಆಸಕ್ತಿ, ಕಳಕಳಿ ಪ್ರತಿಯೊಂದು ಹಂತದಲ್ಲೂ ಎದ್ದು ಕಾಣ್ತಿತ್ತು. ಒಂದು ಒಳ್ಳೆಯ ಪ್ರೋಗ್ರಾಮ್ ಮಾಡಿಕೊಟ್ಟ ಅವರಿಗೆ ಹ್ಯಾಟ್ಸ್ ಆಫ್.
ಪುಸ್ತಕ ಬಹಳ ನೀಟಾಗಿ ಬಂದಿದೆ. ಈ ಕಾರಣಕ್ಕೂ ಮೋಹನ್ ಗೆ ಥ್ಯಾಂಕ್ಸ್ ಹೇಳಬೇಕು. ಇಂಥದೊಂದು ಔಟ್ ಪುಟ್ ಗೆ ಅಪಾರ, ಪ.ಸ.ಕುಮಾರ್, ಇಳಾ ಮುದ್ರಣದವರು ಕೂಡ ಕಾರಣರು. ನನ್ನ ಪುಸ್ತಕವನ್ನ ತೊಗೊಳ್ಳಿ ಅಂತ ನಾನೇ ಹೇಗೆ ಹೇಳ್ಕೊಳ್ಳಲಿ? ಅಂತ ಹಿಂಜರಿಕೆಯಾದ್ರೂ, ಅದು ನನ್ನದಲ್ಲ ಅಂದ್ಕೊಂಡು ಹೇಳ್ತಿದೇನೆ, ನೀವೂ ಅದನ್ನ ಕೊಳಿ, ಓದಿ! ಅದರಿಂದೇನು? ಅಂತ ಕೇಳ್ತೀರಾ? ಅದರಿಂದ ನಿಮಗೇನೂ ಉಪಯೋಗವಿಲ್ಲ ಸರಿ, ಆದರೆ ಹೊಸ ಬರಹಗಾರರಿಗೆ ಪ್ರೋತ್ಸಾಹ ಕೊಟ್ಟಹಾಗಾಗುತ್ತೆ ಅಂತಷ್ಟೆ!
ಮುಂದೇನು? ಏನೂ ಇಲ್ಲ!
ನನ್ನ ಪಾಡಿಗೆ ಬ್ಲಾಗಿಸ್ಕೊಂಡು ಇದ್ದುಬಿಡೋದು, ಅಷ್ಟೆ.
ಆದ್ರೆ, ನಾವು ಹೀಗೆ ಪರಿಚಿತರಾಗಿಯೂ ಅಪರಿಚಿತರಾಗಿರೋದನ್ನ ತಪ್ಪಿಸ್ಕೊಳ್ಳಲಿಕ್ಕೆ ಏನಾದ್ರೂ ಮಾಡ್ಬೇಕು ಅನಿಸ್ಬಿಟ್ಟಿದೆ. ನಾವೆಲ್ಲಾ ತಿಂಗಳಿಗೊಮ್ಮೆ ಎಲ್ಲಾದ್ರೂ ಸೇರೋದು ಬಹಳ ಒಳ್ಳೆಯದು ಅನಿಸ್ತಿದೆ.
ಈ ಬಗ್ಗೆ ನೀವೂ ಯೋಚನೆ ಮಾಡ್ತೀರಾ?
ಕೊನೆಯಲ್ಲಿ…
ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಥ್ಯಾಂಕ್ಸ್. ನಿಮ್ಮ ಪ್ರೀತಿಯ ಋಣ ನನ್ನ ಮೇಲಿದೆ.
ವಂದೇ,
ಚೇತನಾ ತೀರ್ಥಹಳ್ಳಿ

ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ನಾಲ್ಕು ಮಾತು
ನಮಸ್ತೇ…
ನಿಮ್ಮೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಿಶಗಳು.
ನಾನಂತೂ ಈ ತಿಂಗಳು, ಇವತ್ತು ಮಾತ್ರವಲ್ಲದೆ ನಮ್ಮ ಹಿಂದಿನವರು ಸ್ವಾತಂತ್ರ್ಯ ಪ್ರಾಪ್ತಿಗಾಗಿ ಪಟ್ಟ ಬವಣೆಗಳನ್ನ ನೆನೀತಾ ಇರ್ತೇನೆ, ಮಾತಾಡ್ತಾ ಇರ್ತೇನೆ. ಅದೆಲ್ಲ ನನಗೆ ಸಿಕ್ಕ ಸಹವಾಸದ ಫಲವೆಂದೇ ತಿಳಿಯಿರಿ. ಆದರೆ ಇದರಿಂದ ನನಗೆ ವೈಯಕ್ತಿಕವಾಗಿಯೂ ಬಹಳಷ್ಟು ಲಾಭವಾಗಿದೆ. ನಾನು ನಾಡಿನ ಸ್ವಾತಂತ್ರ್ಯದ ಬಗ್ಗೆ ಯೋಚಿಸ್ತ ಯೋಚಿಸ್ತಲೇ ವ್ಯಕ್ತಿಯೊಬ್ಬನ ವೈಯಕ್ತಿಕ ಸ್ವಾತಂತ್ರ್ಯ- ಸ್ವೇಚ್ಚೆಗಳ ಬಗ್ಗೆಯೂ ಯೋಚಿಸಲು ಪ್ರೇರೇಪಣೆ ದೊರೆತಿದ್ದು ಇದರಿಂದಲೇ. ವ್ಯಕ್ತಿಯೊಬ್ಬನ ಸ್ವೇಚ್ಛೆಯನ್ನ ಅಮೆರಿಕಕ್ಕೆ ಹೋಲಿಸಬಹುದು ಅಂತ ಆಗಾಗ ನನಗನಿಸೋದಿದೆ.
~
ಅಂದ ಹಾಗೆ, ಈ ಬಾರಿಯ ಸಂಡೇ ಇಂಡಿಯನ್ ನೋಡಿರುವಿರಾ? ಸಂಪೂರ್ಣ ಸೇನಾ ವಿಶೇಷಾಂಕವಾಗಿ ಹೊರಹೊಮ್ಮಿದೆ ಅದು. ನನಗಂತೂ ಅದೆಷ್ಟು ಖುಷಿಯಾಯ್ತೆಂದರೆ, ಅದನ್ನ ಹೇಳಿಕೊಳ್ಳಲು ಪದಗಳು ಸೋಲುತ್ತಿವೆ.
ಸೇನೆ… ಅವತ್ತು, ೧೮೫೭ರಲ್ಲಿ ಬಿಳಿಯರ ಬೆವರಿಳಿಸಿತಲ್ಲ- ಅದೇ ಸೇನೆ, ೧೯೪೦ರ ದಶಕದಲ್ಲಿ ಐ ಎನ್ ಎ ಹೆಸರಲ್ಲಿ ಅವರನ್ನು ಪತರಗುಟ್ಟುವಂತೆ ಮಾಡಿತಲ್ಲ, ಅದೇ ನಮ್ಮ ಹೆಮ್ಮೆಯ ಸೇನೆ… ಪಾಕಿಸ್ತನದ ಪ್ರತಿ ಬಾರಿಯ ವಂಚನೆಗೆ, ದುರಾಕ್ರಮಣಕ್ಕೆ ತಕ್ಕ ಉತ್ತರ ನೀಡಿ ನಮ್ಮ ಮಾನ ಕಾಪಾಡಿತಲ್ಲ- ಅದೆ ಅದೇ ನಮ್ಮ ಸೇನೆಯ ಬಗ್ಗೆ ಅವರು ಸೊಗಸಾದ ಸಂಚಿಕೆ ಹೊರತಂದಿದಾರೆ. ನೀವೂ ಅದನ್ನು ಕೊಂಡು ಓದಲು ಮರೆಯಬೇಡಿ. ಇದು ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಸಂಡೇ ಇಂಡಿಯನ್ ನೀಡಿರುವ ಉಡುಗೊರೆ ಎಂದೇ ತಿಳಿಯಿರಿ.
~
ನಾನು ಸ್ವಾತಂತ್ರ್ಯ- ಸ್ವೇಚ್ಚೆಯ ಬಗ್ಗೆ ಹೇಳ್ತಿದ್ದೆನಲ್ಲ, ಅದರ ಬಗ್ಗೆ ಮತ್ತೊಮ್ಮೆ ಖಂಡಿತ ಸುದೀರ್ಘ ಚರ್ಚೆ ಮಾಡಬೇಕಿದೆ. ಸದ್ಯಕ್ಕೆ ಅಭಿಮಾನ, ಅಹಂಕಾರಗಳ ಬಗ್ಗೆ ಒಂದೇ ಒಂದು ಉದಾಹರಣೆ ಕೊಡೋಣವೆಂದುಕೊಂಡೆ. ಅದಕ್ಕೆ ಹೊಂದುವಂತೆ ಈ ಬ್ಲಾಗಿನಲ್ಲಿ ಒಂದಷ್ಟು ಚಿತ್ರಗಳಿವೆ ನೋಡಿ. ದೇಶದ ಬಗ್ಗೆ ಅಭಿಮಾನವಿರುವ ವ್ಯಕ್ತಿ ರಚಿಸಿದ ಚಿತ್ರಕ್ಕೂ ತನ್ನ ಕಲಾಕಾರಿಕೆಯ ಬಗ್ಗೆ ದುರಭಿಮಾನವಿರುವ ವ್ಯಕ್ತಿ ರಚಿಸಿರುವ ಚಿತ್ರಕ್ಕೂ ಎಷ್ಟೊಂದು ವ್ಯತ್ಯಾಸ!!
~ಇವರು ಐ ಟಿ ಹುಡುಗರಲ್ಲ!
ಮೇಲೆ ಲಿಂಕ್ ಕೊಟ್ಟಿದೇನಲ್ಲ, ಆ ಬ್ಲಾಗ್ ನೋಡಿದಿರಾ?
ಪರವಾಗಿಲ್ಲ. ಮತ್ತೊಮ್ಮೆ ಯಾವಾಗಲಾದರೂ ಪುರುಸೊತ್ತು ಮಾಡಿಕೊಂಡು ನೋಡಿ. ಅಲ್ಲಿ ಉಲ್ಲೇಖಿಸಿರುವ ಸಂಘಟನೆ ನಡೆಸುತ್ತಿರುವ ಹುಡುಗರು ಭರಪೂರ ದುಡಿದು ಬಿಡುವಿನ ಸಮಯದಲ್ಲಿ ಸದ್ವಿನಿಯೋಗ ಮಾಡಹೊರಟ ಐಟಿ ಉದ್ಯೋಗಿಗಳಲ್ಲ. ಅವರೆಲ್ಲರೂ ಸಾಧಾರಣ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತಿರುವವರು. ( ದೊಡ್ಡ ಸಂಬಳದ ಮಂದಿ ಇತ್ತೀಚೆಗೆ ಸಮಾಜಪರ ಕಾರ್ಯಗಳಲ್ಲಿ ತೊಡಗಿರುವುದು ಸಂತಸದ ಸಂಗತಿ. ಹೆಚ್ಚಾದ ಹಣವನ್ನು ಮೋಜು ಮಸ್ತಿಯಲ್ಲಿ ಹಾಳುಮಾಡದೆ ಇಂತಹ ಕೆಲಸಗಳಲ್ಲಿ ತೊಡಗಿಸುತ್ತಿರುವ ಅವರೆಲ್ಲರ ಬಗ್ಗೆ ನನಗೆ ಮೆಚ್ಚುಗೆಯಿದೆ). ತಮ್ಮ ತಮ್ಮ ಖರ್ಚುಗಳನ್ನು ಸ್ವಲ್ಪ ಮಿತಗೊಳಿಸಿಕೊಂಡು ಅದನ್ನು ಶಾಲಾ ಹುಡುಗರ ತರಬೇತಿ ಶಿಬಿರಗಳನ್ನು ನಡೆಸಲು ವಿನಿಯೋಗಿಸುತ್ತಿರುವವರು. ಅವರಲ್ಲೊಬ್ಬರಂತೂ ಬಿಡುವಿನ ವೆಳೆಯಲ್ಲಿ ಆಟೋ ಓಡಿಸಿ ಹಣ ಉಳಿಸಿ, ಸತ್ಕಾರ್ಯಗಳಿಗೆ ವಿನಿಯೋಗಿಸುತ್ತಿರುವರು!
ಈ ಹುಡುಗರದೊಂದೇ ಬಯಕೆ, ನಮ್ಮ ಮುಂದಿನ ಪೀಳಿಗೆ ಸ್ವಾಭಿಮಾನೀ- ಸದೃಢ ಪೀಳಿಗೆಯಾಗಿ ಹೊರಹೊಮ್ಮಬೇಕು. ರಾಷ್ಟ್ರದ ಪತಾಕೆಯನ್ನ ಮುಗಿಲೆತ್ತರಕ್ಕೆ ಹಾರಿಸುವಂತಾಗಬೇಕು! ಕನಸುಗಣ್ಣಿನ ಈ ಹುಡುಗರಿಗೆ ಸ್ವಾಮಿ ವಿವೇಕಾನಂದರೇ ಸ್ಫೂರ್ತಿ. ಅವರ ಅದರ್ಶದಲ್ಲಿ ಇವರೆಲ್ಲರ ಹೆಜ್ಜೆ.
ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಈ ಸಂಘಟನೆಯನ್ನು ಹುಟ್ಟುಹಾಕಿದ್ದು ಇಂತಹ ‘ಏನಾದರೂ ಮಾಡಬೇಕು ಸಾರ್’ ಅಂತ ಬೆನ್ನು ಬಿದ್ದಿದ್ದ ಹುಡುಗರಿಗಾಗಿಯೇ. ಅದಿಂದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತ ನಡೆದಿದೆ.
ರಾಷ್ಟ್ರ ಹಬ್ಬದ ಸಂದರ್ಭದಲ್ಲಿ ರಾಷ್ಟ್ರ ಕಟ್ಟುವ ಕಾಯಕ ಮಾಡುತ್ತಿರುವ ಅವರಿಗೊಂದು ಶಹಬ್ಬಾಸ್ ಹೇಳಬೇಕಾದುದು ನಮ್ಮ ಕರ್ತವ್ಯವಲ್ಲವೆ?
~
ಮತ್ತೊಮ್ಮೆ,
ಸ್ವಾತಂತ್ರ್ಯೋತ್ಸವದ ಶುಭ ಹಾರೈಕೆಗಳು…

ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ
ಈಗ ಅದೆಲ್ಲ ಮಜಾ ಅನಿಸತ್ತೆ.
ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ ಬರೆದಿರಲಿಲ್ಲ! ( ಆಮೇಲೆ ಬರ್ದೆ ಅಂದ್ಕೊಳ್ಬೇಡಿ… ನಾನು ಓದು ನಿಲ್ಲಿಸಿದ್ದು ಆಗಲೇ. ಮದ್ವೆ ಆಯ್ತಲ್ಲ, ಅದ್ಕೆ…) ಆದ್ರೂ ನಾನು ಮೊದಲ ಮೂರು ಪ್ಲೇಸಲ್ಲಿ ಇರ್ತಿದ್ದೆ ಅನ್ನೋದು ನಾನು ಕೊಟ್ಕೊಳೋ ಸಮಜಾಯಿಶಿ! (ನೀವು ನನ್ನ ಶತದಡ್ಡಿ ಅಂದ್ಕೋಬಾರದಲ್ಲ, ಅದ್ಕೆ!!)
ಹಾಗಾದ್ರೆ, ದಪ್ಪ ದಪ್ಪ ರಟ್ಟಿನ ನೂರು- ಇನ್ನೂರು ಪುಟಗಳ ‘ಲೇಖಕ್’ ನೋಟ್ ಬುಕ್ ಗಳನ್ನ ನಾನೇನು ಮಾಡ್ತಿದ್ದೆ?
ಕೊನೆ ಪುಟದಿಂದ ಹಿಡಿದು ಉಲ್ಟಾ ಮಾಡ್ಕೊಂಡು ಚಿತ್ರ, ಕವನ ಬರೀತಿದ್ದೆ! ರಾಮಾಯಣ, ಮಹಾಭಾರತದ ಕಥೆಗಳ್ನ ಗೀಚಿಟ್ಕೊಳ್ತಿದ್ದೆ!!
ಹೀಗೊಮ್ಮೆ ಕಂಬಳಿ ಹುಳದ ಕವನ ಬರೆದಾಗಲೆ ನಾನು ಸಿಕ್ಕಿಬಿದ್ದಿದ್ದು. ಐದನೇ ಕ್ಲಾಸಲ್ಲಿ ಟೀಚರ್ರು ‘ಚಿಟ್ಟೆಯ ಜೀವನ ಚರಿತ್ರೆ’ ಪಾಠದ ನೋಟ್ಸು ಕೊಡ್ತಿದ್ದರೆ, ನಾನು ತಲೆ ತಗ್ಗಿಸ್ಕೊಂಡು ನೆಲ್ಲಿಕಾಯಿ ತಿನ್ನುತ್ತ ಕವಿತೆ ಬರೆಯುತ್ತಿದ್ದೆ!
ಆವರೆಗೂ ನೋಟ್ಸು ನೋಡುವ ದಿನ ಊರುಕೇರಿಯದೆಲ್ಲಾ ಬುದ್ಧಿ ಉಪಯೋಗಿಸಿ ಪಾರಾಗಿಬರ್ತಿದ್ದ ನಾನು ಅವತ್ತು ಸಿಕ್ಕಿಬಿದ್ದಿದ್ದೆ. ಕ್ಲಾಸ್ ಮೇಟುಗಳೆಲ್ಲ ಶೇಮ್ ಶೇಮ್ ಅಂದುಬಿಟ್ಟರು! ಇನ್ನೊಂದು ತಿಂಗಳಲ್ಲಿ ಆವರೆಗಿನ ಎಲ್ಲ ನೋಟ್ಸು ಬರೆದು ತೋರಿಸುವವರೆಗೂ ಯಾರೂ ನನ್ನ ಹತ್ರ ಮಾತಾಡಬಾರದು ಅಂತ ಟೀಚರ್ ತಾಕೀತು ಮಾಡಿದರು. ಅಮ್ಮನಿಗೆ ಬುಲಾವು ಹೋಯಿತು.
ನನಗೆ ಅದ್ಯಾವುದೂ ದೊಡ್ಡ ಶಿಕ್ಷೆ ಅನಿಸಲೇ ಇಲ್ಲ! ಯಾಕೆಂದರೆ, ನಾನಂತೂ ನೋಟ್ಸು ಬರೆಯುವುದೇ ಇಲ್ಲ ಅಂತ ನಿರ್ಧಾರ ಮಾಡಿಬಿಟ್ಟಿದ್ದೆ!!
ಈಗಲೂ ನನ್ನದದೊಂದು ಮೊಂಡು ವಾದವಿದೆ. ಫಲಿತಾಂಶ ಮುಖ್ಯವೇ ಹೊರತು ಪ್ರೊಸೀಜರ್ ಅಲ್ಲ ಅನ್ನೋದು!
ಆದ್ರೆ ಗಣಿತದಲ್ಲಿ ಪ್ರತಿ ಪ್ರಕ್ರಿಯೆಗೂ ಮಾರ್ಕ್ಸ್ ಇದೆ, ಫಲಿತಾಂಶ ತಪ್ಪಿದ್ರೂ ಒಂದಷ್ಟು ಮಾರ್ಕ್ಸು ಸಿಗತ್ತೆ… ಬಹುಶಃ ಫಲಿತಾಂಶಕ್ಕೆ ಮೊರೆ ಹೋಗುವ ನಾನು ಲೆಕ್ಕಾಚಾರ ತಪ್ಪೋದು ಅಲ್ಲಿಯೇ ಅನಿಸುತ್ತೆ…
ಸರಿ… ನನಗೆ ಹೀಗಾಯ್ತಲ್ಲ ಅಂತ ಬೇಜಾರಿರಲಿಲ್ಲ. ನಾಳೆ ನನ್ನಮ್ಮ ಬರ್ತಾಳಲ್ಲ, ಈ ಟೀಚರ್ ಅದೇನೇನು ಹೇಳ್ತಾರೋ ನನ್ ಬಗ್ಗೆ ಅಂತೆಲ್ಲ ಚಿಂತೆ ಕಾಡತೊಡಗಿತು. ಅಮ್ಮನೂ ಬಂದೇಬಂದಳು. ಟೀಚರ್ ಹೇಳಿದ್ದನ್ನೆಲ್ಲ ಕೇಳಿಕೊಂಡು ನನ್ನ ಕಡೆಗೊಮ್ಮೆ ತಿರುಗಿ, ‘ಮನೆಗ್ ಬಾ, ಮಾಡ್ತೀನಿ’ ಅನ್ನೋ ಥರ ನೋಡ್ಕೊಂಡು ಹೋದಳು.
ಕೆಂಪು ಕೆಂಪು ಅಮ್ಮನನ್ನ ಊಹಿಸ್ಕೊಂಡು ಹೋಗಿದ್ದ ನಂಗೆ ಒಂದು ಥರ ನಿರಾಶೆಯೇ ಆಯ್ತು! ಅವಳು ನನ್ನ ದೊಡ್ಡಮ್ಮನಿಗೆಲ್ಲ ಕಥೆ ಹೇಳಿ ನಗ್ತಿದ್ದಳು!! ಕೊನೆಗೆ, ಅಪ್ಪ ಬರಲಿ ತಾಳು, ಅಂದು ಸುಮ್ಮಗಾದಳು.
ಅಪ್ಪನೂ ಬಂದಿದ್ದಾಯ್ತು. ನನ್ನ ನೋಟ್ಸುಗಳನ್ನ ನೋಡಿ ಅದರೊಳಗಿದ್ದ ಚಿತ್ರಗಳನ್ನ ನೋಡಿ ಅವರು ತಲೆ ಮೇಲೊಂದು ಕುಟ್ಟಿದ್ದು, ನಾನು ನೋವಿಗಿಂತ ಹೆಚ್ಚಾಗಿ ಸಿಟ್ಟು- ಅಸಹಾಯಕತೆಗಳಿಂದ ಅತ್ತಿದ್ದು, ಎಲ್ಲಾ ಮುಗೀತು. ಆದರೂ ಅವರು ಹೆಚ್ಚು ದಂಡಿಸುವ ಹಾಗಿರಲಿಲ್ಲ. ಯಾಕಂದರೆ ನನ್ನ ಮಾರ್ಕುಗಳು ನನಗೆ ಬೆಂಬಲವಾಗಿದ್ದವಲ್ಲ!?.
ಹಾಳೆ ತಿರುಗಿಸ್ತ, ತಿರುಗಿಸ್ತ ಅಪ್ಪ ‘ಚಿಂತೆ’ ಅನ್ನುವ ಕವಿತೆ ಓದಿದರು. ಏಕ್ ದಂ ಇಡಿಯ ಮನೆ ತಣ್ಣಗಾಗಿ ಹೋಯ್ತು. ಅಪ್ಪನ ಮುಖ ಪೂರ್ತಿ ಬದಲಾಯ್ತು. “ಇದನ್ಯಾವಾಗ ಬರೆದೆ ಮಗಳೇ?’ ಅಂದರು.
ಅದನ್ನ ನಾನು, ಅಪ್ಪ ಮನೆ ರಿಪೇರಿಗೆ ದುಡ್ಡು ಹೊಂಚುವುದು ಹೇಗೆ ಅಂತ ಚಿಂತಿಸ್ತಿದ್ದನ್ನ ನೋಡಿ ಬರೆದಿದ್ದೆ!
ಮುಗಿಯಿತು. ಅಪ್ಪ ಮತ್ತೆಂದೂ ಕವಿತೆ ಬರೆದಿದ್ದಕ್ಕೆ ನನಗೆ ಹೊಡಿಯಲಿಲ್ಲ! ಶಿಸ್ತು ಕಲಿ ಅಂತ ಆಗಾಗ ರೇಗಿದರೂ ಒತ್ತಡ ಹೇರಲಿಲ್ಲ. ನಾನು ಏನೊಂದೇ ಬರೆದರೂ ಅದನ್ನ ತಾವೇ ಟೈಪ್ ಮಾಡಿಕೊಂಡು ಬಂದು ಅವರಿವರಿಗೆ ಹಂಚತೊಡಗಿದರು. ಮೊದಲೇ ಸಂಕೋಚದ ಮುದ್ದೆಯಾಗಿದ್ದ, ಒಂಟಿಬಡಕಿಯಾಗಿದ್ದ ನಾನಂತೂ ನಾಚಿಕೆಯಿಂದ ಮುದ್ದೆಯಾಗಿಹೋಗ್ತಿದ್ದೆ. ಹೀಗೆಲ್ಲ ತಮ್ಮ ಮಗಳ ಬಗ್ಗೆ ತಾವೇ ಹೇಳ್ಕೊಂಡ್ರೆ ಜನ ಏನಂದ್ಕೊಳ್ತಾರೆ? ಅಂತ ಮುಜುಗರಪಡ್ತಿದ್ದೆ. ಅಡುಗೆ ಮನೇಲಿ ಅಮ್ಮನ ಜತೆ ಪಿಸುಗುಟ್ಟುತ್ತ ಬಯ್ಕೊಳ್ತಿದ್ದೆ…
ಈಗ ನನ್ನ ಬಗ್ಗೆ ನಾನೇ ಹೇಳ್ಕೊಳ್ತಿದೀನಲ್ಲ? ನೀವು ಕೇಳಬಹುದು… ಇದನ್ನೆಲ್ಲ ಹೇಳಿಕೊಳ್ಳಲೇಬೇಕೆಂಬ ಬಯಕೆಯಲ್ಲಿ, ನೀವೇನೆಂದುಕೊಳ್ತೀರೋ ಅನ್ನೋ ಮುಜುಗರದಲ್ಲೇ ಈಗ ಇದನ್ನ ಬರೀತಿದೇನೆ. ( ಮತ್ತೆ ಸಮಜಾಯಿಷಿ!) ಮತ್ತಿದು, ಬಹುತೇಕರ ಬಾಲ್ಯದಲ್ಲಿ ನಡೆದಿರಬಹುದಾದ ಘಟನೆಯೇ ಅಲ್ಲವೇ?
ಬಹುಶಃ ನನ್ನ ವಿಧಿಗೆ ಗೊತ್ತಿತ್ತು, ನನಗೆ ಶಾಲೆಯ ಓದು, ನೋಟ್ಸಿಗಿಂತ ಈ ರೀತಿಯ ಬರೆಯುವ ತೆವಲೇ ಬದುಕು ನೀಡೋದು ಅಂತ. ಬೆಂಗಳೂರಿಗೆ ಕಾಲಿಟ್ಟ ಮೂರು ವರ್ಷದಿಂದ ನಾಲ್ಕು ಕೆಲಸ ಬದಲಿಸಿದ್ದೇನೆ. ಪ್ರತಿ ಸಾರ್ತಿಯೂ ವಿದ್ಯಾರ್ಹತೆ ಎದುರಿಗೆ ‘ಸೆಕೆಂಡ್ ಪಿಯುಸಿ’ ಅಂತ ಬರೆಯುವಾಗೆಲ್ಲ ಮುಖ ಸಣ್ಣ ಮಾಡ್ಕೊಂಡಿದ್ದೇನೆ. ಆದರೂ ಅದಕ್ಕಿಂತ ಹೆಚ್ಚಾಗಿ ಅಕ್ಷರಗಳ ಕರುಣೆಯಲ್ಲೇ ಇವತ್ತು ನೆಮ್ಮದಿಯಾಗಿ ಉಳಿದಿದ್ದೇನೆ. ತಲೆಯಲ್ಲಿ ಇಂಥದೊಂದು ಮೆದುಳಿಟ್ಟು ಕಳಿಸಿದ ದೇವಿಗೆ ಥ್ಯಾಂಕ್ಸ್ ಹೇಳುವುದಷ್ಟೆ ನಾನು ಮಾಡಬಹುದಾದ ಕೆಲಸ ಅನಿಸುತ್ತೆ…
ಇವತ್ತಿದನ್ನೆಲ್ಲ ನಾನ್ಯಾಕೆ ಹೇಳ್ಕೊಳ್ತಿದೇನೆ? ಕಾರಣವಿದೆ…
ಬರುವ ಸೋಮವಾರ ಹದಿನೆಂಟನೆ ತಾರೀಖು ಸಂಜೆ ಆರು ಗಂಟೆಗೆ, ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ನನ್ನ ಪುಸ್ತಕ ‘ಭಾಮಿನಿ ಷಟ್ಪದಿ’ ಬಿಡುಗಡೆಯಾಗಲಿದೆ. ಅದಕ್ಕೇ, ಇದೊಂದು ಪುಟ್ಟ ಫ್ಲ್ಯಾಶ್ ಬ್ಯಾಕು!
ಜಿ.ಎನ್.ಮೋಹನ್ ಬಹಳ ಮುದ್ದಾಗಿ, ನೀಟಾಗಿ ಪುಸ್ತಕವನ್ನ ಹೊರತಂದಿದ್ದಾರೆ. ಅವರ ಕೈವಾಡವಿಲ್ಲದಿದ್ದರೆ, ನಾನೇ ಪ್ರಕಾಶನದ ಹೊಣೆ ಹೊತ್ತುಕೊಂಡಿದ್ದರೆ ಖಂಡಿತ ಇಷ್ಟು ಒಳ್ಳೆಯ ಪುಸ್ತಕ ಹೊರಬರ್ತಿರಲಿಲ್ಲ.
ಅಪಾರ ಸೊಗಸಾದ ಮುಖ ಪುಟ- ಪುಟ ವಿನ್ಯಾಸಗಳನ್ನು ಮಾಡಿಕೊಟ್ಟಿದ್ದಾರೆ.
ಪ.ಸ ಕುಮಾರ್ ರೇಖೆಗಳು ಅರ್ಥಪೂರ್ಣವೂ ಆಪ್ತವೂ ಆಗಿವೆ.
ಜೋಗಿಯವರು ಮುನ್ನುಡಿ ಬರೆದು ಪ್ರೋತ್ಸಾಹಿಸಿದರೆ, ನಟರಾಜ್ ಹುಳಿಯಾರ್ ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ.
‘ಭಾಮಿನಿ ಷಟ್ಪದಿ’ಗೆ ಮೂಲ ಕಾರಣರಾದ ವೆಂಕಟ್ರಮಣ ಗೌಡರು ‘ಉಫೀಟ್’ ಕವನ ಸಂಕಲನಕ್ಕೆ ಬರೆದುಕೊಟ್ಟ ನಲ್ನುಡಿಗಳು ಇಲ್ಲಿಯೂ ಇವೆ.
ಅವತ್ತು ಪ್ರೊ. ವಿವೇಕ್ ರೈ, ಜಿ.ಪಿ.ಬಸವ ರಾಜು ಅವರು ವೇದಿಕೆಯಲ್ಲಿರುತ್ತಾರೆ. ಗೆಳತಿ, ಬರಹಗಾರ್ತಿ ಟೀನಾ ಪುಸ್ತಕದ ಬಗ್ಗೆ ಮಾತನಾಡುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಅವತ್ತು ನೀವು ಇರುತ್ತೀರಿ.
ನಿಮ್ಮಲ್ಲಿ ಶೇ.೯೦ ಮಂದಿಯನ್ನು ನಾನು ನೋಡಿಲ್ಲ. ಆದರೆ ನಿಮ್ಮೆಲ್ಲರ ಸ್ನೇಹ- ಪ್ರೀತಿಗಳ ಸವಿಯನ್ನು ಈ ಒಂದು ವರ್ಷದಿಂದ ಉಣ್ಣುತ್ತಲೇ ಬಂದಿದ್ದೇನೆ. ನಿಮಗೆಲ್ಲರಿಗೂ ನಾನು ಋಣಿ.
ನೀವು ‘ಸೋಮವಾರ’ ಇತ್ಯಾದಿ ಯಾವ ನೆವವನ್ನೂ ಹೇಳದೆ ಅಂದಿನ ಕಾರ್ಯಕ್ರಮಕ್ಕೆ ಬಂದರೆ ನನಗೆ ಬಹಳ ಬಹಳ ಖುಷಿಯಾಗುತ್ತದೆ. ನೀವೆಲ್ಲರೂ ಖಂಡಿತ ಬರಲೇಬೇಕು.
ನಿಮಗಾಗಿ ಕಾದಿರುತ್ತೇನೆ.
ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ

ಭೀಮೇಶ್ವರನ ಭಂಡಾರ ಮತ್ತು “ಎಲ್ಲ ಕರಗಿ ಕರಗಿ ಕರಗಿ…”
ಉಜ್ವಲಾ, ಕಿಶೋರಿ, ಗಿರಿಧಾರಿ… ಮೂವರೂ ಒಬ್ಬರ ಹಿಂದೊಬ್ಬರು ಸೊಂಯ್ ಸೊಂಯ್ ಅಂತ ಓಡೋಡಿ ಬಂದು ನನ್ನ ಡೆಸ್ಕಿನ ಕೆಳಗೆ ಬಚ್ಚಿಟ್ಟುಕೊಳ್ಳಲು ಪೈಪೋಟಿ ಶುರುವಿಟ್ಟರು. ಯಾಕೋ ಬೆಳಗಿಂದಲೂ ‘ಇವತ್ತು ಶನಿವಾರ’ ಅನ್ನುವ ಭ್ರಮೆಯಲ್ಲಿದ್ದ ನನಗೆ ಇನ್ನೇನು ಅದು ಖಚಿತವಾಗ್ಬೇಕು, ನನ್ನ ಕಲೀಗು, ‘ಯಾಕೆ? ಸ್ಕೂಲ್ ಬಿಟ್ ಬಿಟ್ರ?’ ಕೇಳೇಬಿಟ್ಟರು.
ಆ ಮಕ್ಕಳಲ್ಲಿ ಇಬ್ಬರು ‘ಎಕ್ಲಿಪ್ಸಿಗೆ ಹಾಲಿಡೇ’ ಅಂತ ನುಲಿದರೆ, ಉಜ್ವಲಾ ‘ಇವತ್ತೂ… ಅಮವಾಸ್ಯಾ’ ಅಂತ ಗಿಳಿಯ ಹಾಗೆ ಉಲಿದಳು.
~
ಅಮವಾಸ್ಯೆ?
ಈ ಪುಟಾಣಿಗೆ ಗ್ರಹಣದ ಸಂಗತಿ ಗೊತ್ತಿಲ್ವೇನೋ, ಅದಕ್ಕೇ ಹೀಗೆ ಹೇಳ್ತಿದೆ ಅಂತ ತಿಳಿದೆ.
ಲೀಸರಿನಲ್ಲಿ ಕೆಳಗೆ ಹಾಡುತ್ತ- ಕುಣಿಯುತ್ತ ಉನ್ಮತ್ತರಾಗಿದ್ದ ಭಕ್ತರನ್ನ ನೋಡುತ್ತ ಮೈಮರೆತಿದ್ದೆವು. ಜತೆಯಲ್ಲಿದ್ದವಳು ಏನೋ ಜ್ಞಾನೋದಯವಾದವರ ಹಾಗೆ “ನನ್ ಮಗಂಗೆ ಇವತ್ತು ಹಾಫ್ ಡೇ. ಭೀಮನ್ ಅಮವಾಸ್ಯೆ ಅಂತೆ!? ನಿಮ್ ಬ್ರಾಹ್ಮಿನ್ಸಲ್ಲಿ ಮಾಡ್ತೀರಲ್ವಾ ಅದ್ನ?”
ಭೀಮನ ಅಮಾವಾಸ್ಯೆ?
ಮೈಮೇಲೆ ತಣ್ಣೀರು ಚೆಲ್ಲಿದ ಹಾಗಾಯ್ತು ಒಮ್ಮೆಗೆ!
ಮೊಬೈಲು ಕೈಗೆ ಬಂದಮೇಲೆ ಬಹುಶಃ ಕ್ಯಾಲೆಂದರು ನೋಡಿದ್ದೇ ಇಲ್ಲ ನಾನು! ಪಂಚಾಂಗ ಬಿಡಿ, ದೂರದ ಮಾತು.
ಕಳೆದೆರಡು ವರ್ಷ ಮೇಲಿನ ಮನೆಯ ಘಮಘಮದಿಂದಲಾದ್ರೂ ಹಬ್ಬ- ಹುಣ್ಣೀಮೆ ತಿಳೀತಿತ್ತು. ಈ ಸಾರ್ತಿ ಅದೂ ಇಲ್ಲ. ಓನರಜ್ಜ ಇಲ್ಲವಾದ ಸೂತಕ ಅವರ ಮನೆಯಲ್ಲಿ…
ಆದ್ರೂ, ಭೀಮನ ಅಮವಾಸ್ಯೆ…
ಬಿಡಿ. ಅದೇನೂ ನಾನು ಆಚರಿಸೋ ಅಂತ ಹಬ್ಬವಲ್ಲ. ಅದಕ್ಕಷ್ಟು ಪ್ರಾಮುಖ್ಯತೆಯೂ ಇಲ್ಲ.
ಊರ ಕಡೆ ‘ನಾವು’ ಅದ್ನ ಭೀಮನ ಅಮಾವಸ್ಯೆ ಅಂತ ಆಚರಿಸಿದ್ರೆ, ‘ಬೇರೆಯವ್ರು’ ಅದ್ನ ಕೊಡೆ ಅಮಾವಾಸ್ಯೆ ಅಂತ ಕರ್ದು, ಕಹೀ ಔಷಧಿ ಕುಡಿದು ಸೆಲೆಬ್ರೇಟ್ ಮಾಡ್ತಿದ್ರು.
ಆದ್ರೆ ನಾನು ಅನ್ನೋ ನಂಗೆ ಈ ಗಣೇಶನ ಹಬ್ಬಕ್ಕಿಂತ ಸ್ವರ್ಣ ಗೌರೀವ್ರತ, ದೀಪಾವಳಿಗಿಂತ ತುಳಸೀ ಪೂಜೆ, ದೊಡ್ಡ ದೊಡ್ಡ ಹಬ್ಬಗಳಿಗಿಂತ ನಾಗರ ಚೌತಿ- ಪಂಚಮಿ, ಭೀಮನ ಅಮಾವಾಸ್ಯೆ, ಸಿರಿಯಾಳ ಷಷ್ಟಿ ಇವುಗಳೇ ಬಹಳ ಇಷ್ಟದ ಹಬ್ಬಗಳಾಗಿಬಿಡ್ತಿದ್ವು.
ಭೀಮನ ಅಮಾವಾಸ್ಯೆ…
ಆಸು ಪಾಸಲ್ಲಿದ್ದ ದೊಡ್ಡಮ್ಮ, ಮಾವನ ಮನೆಗಳಲ್ಲಿ ಹಸೀ ಭಂಡಾರ ಮಾಡಿ ಅಣ್ಣಂದಿರು ಒಡೀತಿದ್ರೆ, ನಮ್ಮನೇಲಿ ಅಮ್ಮ ಕರಿದ ಪೂರಿ ಹಾಗಿನ ಭಂಡಾರ ಮಾಡ್ತಿದ್ಲು!
ಅವರ ಮನೆಗಳಲ್ಲಿ ಭಂಡಾರ ಒಡೆದ ಅಣ್ಣ ತಮ್ಮಂದಿರಿಗೆ ಅಕ್ಕ- ತಂಗಿಯರು ದಕ್ಷಿಣೆ ಕೊಡಲಿಕ್ಕಿದ್ರೆ, ನಮ್ಮನೇಲಿ ಅವರೇ ನಂಗೆ ಕೊಡ್ಬೇಕು!
ಇಷ್ಟರ ಮಧ್ಯೆ ಜ್ಯೋತಿರ್ಭೀಮೇಶ್ವರ ವ್ರತ ಅನ್ನೋ ವ್ರತ ಅವತ್ತು. ಕೈಗೆ ಮಲ್ಲಿಗೆ ಹೂ ಸಿಗಿಸಿದ ಅರಿಷಿಣ ದಾರ ಕಟ್ಕೊಂಡು ಚೆಂದ ಚೆಂದದ ಹೂಗಳಿಂದ ಈಶ್ವರನ ಪೂಜೆ ಮಾಡೋದಿತ್ತು ಆಗೆಲ್ಲಾ.
ಆಹಾ! ಆ ಅರಿಷಿಣ ಒದ್ದೆಗೆ ಕ್ದಡಿಕೊಂಡು ಬೆಳ್ಳನೆ ಕೈತುಂಬ ಹರಿದು, ಅದೆಂಥದೋ ಬಣ್ಣ ಬಣ್ಣ! ಜತೆಗೆ, ಪೂಜೆ ಮಾಡಿ ಕೇಳಿಕೊಂಡ ‘ಒಳ್ಳೇ ಗಂಡನ’ ಕನಸು! ಮೊದಲೇ ಮಳೆಗಾಲ… ಅಪರೂಪಕ್ಕೆ ಹೂ ಮುಡಿದು ಕಾಲೇಜಿಗೆ…. ಓಹ್! ಯಾವ ಯಾವ ಹಿಂದೀ ಹಡುಗಳೋ, ಸಾಲುಗಟ್ಟಿ ನಿಲ್ತಿದ್ವು.
ಈ ಭೀಮನ ಅಮವಾಸ್ಯೆ ಮಾಡಿದ ಸಂಜೆ ವ್ರತ ಕಲಶದ ವಿಸರ್ಜನೆ ಮಾಡಲಿಕ್ಕಿತ್ತು. ಆಗ ಅಮ್ಮ ವ್ರತ ಕಥೆಯನ್ನು ರಾಗವಾಗಿ ಓದಿ ಹೇಳ್ತಿದ್ಲು. ಎಲ್ಲ ಮುಗಿದು ಪ್ರಸಾದದ ನೆವದಲ್ಲಿ ತಿಂಡಿ- ತೀರ್ಥ ಮುಗಿಸಿದ ಮೇಲೆ ತಲೆ ಹರಟೆ ಪ್ರಶ್ನೆಗಳನ್ನ ಕೇಳಿ ಬೈಸಿಕೊಳ್ಳೋದಿತ್ತು ನಾನು.
ವ್ರತದ ಕಥೆ…
ಈ ಕಥೆಯಲ್ಲಿ ಒಬ್ಬ ಬದ ಹುಡುಗಿಯನ್ನ ಸತ್ತ ರಾಜಕುಮಾರನ ಕಳೇವರದ ಜತೆ ಮದುವೆ ಮಾಡಿಕೊಡಲಾಗುತ್ತೆ. ಇಲ್ಲಿ ಮೊದಲೇ ಹುಡುಗಿ ಹಣೇಲಿ ಹಾಗಿತ್ತು… ಅವರೂ ಅನುಕೂಲಸ್ಥರೇ… ಇತ್ಯಾದಿ ಪಾಠಾಂತರಗಳಿವೆ. ಹಾ! ಹೀಗೆ ಮದುವೆ ಮಾಡಿದ್ರೆ ರಾಜ ಕುಮಾರ ಬದುಕಿ ಬರುವನೆಂಬ ಅಶರೀರ ವಾಣಿಯೂ ಮೊಳಗಿದ್ದಿರಬೇಕು!
ಮದುವೆ ಮುಗಿದ ಸಂಜೆ ಮದುಮಗಳನ್ನ ಸ್ಮಶಾನದಲ್ಲೇ ಬಿಟ್ಟು ಎಲ್ರೂ ಹೊರಟುಹೋಗ್ತಾರೆ. ಜೋರು ಮಳೆ ಬೇರೆ. ಹರೆಯದ ಹುಡುಗಿಗೆ ಭಯವೋ ಭಯ. ಆ ರಾತ್ರಿ ಪೂರ್ತಿ ಶಿವನ ಪೂಜೆಯಲ್ಲಿ ಕಳೆಯೋ ಹುಡುಗಿ ಮಾರನೆ ಬೆಳ್ಸುತ್ತ ಸ್ಮಶಾನಗ್ಗೆ ಮರಳಲ್ಲಿ ಶಿವ ಲಿಂಗ ಮಾಡಿ ಮತ್ತೆ ಪೂಜಿಸಿ, ಮರಳಲ್ಲೇ ಭಂಡಾರ ಮಾಡಿ ‘ಇದನ್ನ ಒಡೀಲಿಕ್ಕೆ ಬಾ ತಂದೇ… ಶಿವನೇ…’ ಅಂತ ಮೊರೆಯಿಡ್ತಾಳೆ. ಭೀಮೇಶ್ವರ ಬಂದು ಭಂಡಾರ ಒಡೆದು, ‘ತಂಗೀ, ಏನು ವರ ಬೇಕು?’ ಅಂತ ಕೇಳ್ತಾನೆ. ಯಥಾ ಪ್ರಕಾರ, ಗಂಡನ ಪ್ರಾಣ!
ಸರಿ. ರಾಜ ಕುಮಾರ ‘ನಿದ್ದೆಯಿಂದ ಎದ್ದ ಹಾಗೆ’ ಎದ್ದು ಬರ್ತಾನೆ. ಅವನಿಗೆ ತಾನು ಸತ್ತು ಹೋಗಿದ್ದೆ ಅಂತ ಗೊತ್ತೇ ಇರೋದಿಲ್ಲ. ಸುತ್ತ ಸ್ಮಶಾನ, ಎದುರಲ್ಲಿ ಸುಂದರಿ! ಅಂವ ‘ಇದ್ಯಾವುದೋ ಪಿಶಾಚಿ ಇರಬೇಕು’ ಅಂತ ಗಾಬರಿಯಾಗಿ ಅವಳನ್ನ ಹೀಯಾಳಿಸಿ ಓಡಿ ಹೋಗ್ತಾನೆ.
ಪಾಪ…ಇಲ್ಲಿ ಈ ಹುಡುಗಿ…
ಮತ್ತೆ ಅದೂ ಇದೂ ಆಗಿ, ರಾಜಕುಮಾರನ ಅಪ್ಪ ಅಮ್ಮ ಬೇರೆ ಹುಡುಗಿ ಮದ್ವೆ ಮಾಡಿಸ್ಲಿಕ್ಕೆ ಸಂಚು ಹೂಡಿ, ಆ ಹೊತ್ತಿಗೆ ಈಕೆ ಮತ್ತೆ ಶಿವನನ್ನ ಒಲಿಸ್ಕೊಂಡು ಅವನಿಂದ್ಲೇ ಸಾಕ್ಷಿ ಹೇಳಿಸಿ…
ಅಂತೂ ಎಲ್ಲವೂ ಸುಖಾಂತ್ಯ.
ರಾಜ ಕುಮಾರ, ಅವನ ಹೆಂಡ್ತಿ ನೂರ್ಕಾಲ ಸುಖವಾಗಿ ಬಾಳ್ತಾರೆ.
~
ಮದುವೆಯಾದ ಮೇಲೆ ಒಂಭತ್ತು ವರ್ಷ ಈ ವ್ರತ ಮಾಡೋದಿದೆ. ಮಾಡಿ, ಕೊನೆಯಲ್ಲಿ ಅಷ್ಟೂ ವರ್ಷ ಭಂಡಾರ ಒಡೆದ ಅಣ್ಣ- ತಮ್ಮಂದಿರಿಗೆ ದೀಪದ ಕಂಬ ಉಡುಗೊರೆ ಕೊಡಬೇಕು. ಹೀಗೇ ಏನೇನೋ…
ಅರಿಷಿನಕೆನ್ನೆಯ ಗಲಗಲದ ಹೆಣ್ಣುಗಳು ಅವೆಲ್ಲವನ್ನೂ ಮಾಡ್ತಾರೆ. ಗಂಡಂದಿರ ಜತೆ ಗುದ್ದಾಡಿ ತವರಿಗೆ ಉಡುಗೊರೆ ಕಳಿಸಿ ಬೀಗ್ತಾರೆ. ತಮ್ಮ ಹೆಣ್ಣುಮಕ್ಕಳನ್ನ ಕೂರಿಸ್ಕೊಂಡು ವ್ರತ ಕಥೆ ಹೇಳ್ತಾರೆ.
~
ಊರಲ್ಲಿ ಆಷಾಡದ ಮಳೆ ಜೋರು. ಎಲ್ಲ ಕರಗಿ ಕರಗಿ ಹೋಗ್ತಿದೆ.
ಮೂವತ್ತು ವರ್ಷಗಳೂ ಕರಗಿ ಹೋದವು. ಆ ಏಳು ವರ್ಷಗಳೂ, ಈ ನಾಲ್ಕು ವರ್ಷಗಳೂ…
ಭಂಡಾರವೂ ಕರಗಿ, ಅಮಾವಾಸ್ಯೆಯೂ ಕರಗಿ, ಭೀಮೇಶ್ವರನೂ ಕರಗಿ ಕರಗಿ…
ಕೊನೆಯಲ್ಲೇನು ಉಳಿಯಬಹುದು? ನಾನೇನು ಉಳಿಸಿ ಕರಗಬಹುದು?

ಭಾಮಿನಿ ಷಟ್ಪದಿ, ಮುನ್ನುಡಿ ಮತ್ತು ಬೆನ್ನುಡಿ…
ನಮಸ್ತೇ
‘ಭಾಮಿನಿ’ ಅಂತೂ ತಯಾರಾಗಿ ನಿಂತಿದ್ದಾಳೆ. ನೀವು ಕೇಳುತ್ತಿದ್ದ ‘ಎಲ್ಲಿ?’, ‘ಯಾವಾಗ?’ಗಳಿಗೂ ಆದಷ್ಟು ಬೇಗ ಉತ್ತರಿಸುವೆ. ಸಧ್ಯಕ್ಕೆ ಭಾಮಿನಿ ಶಟ್ಪದಿಗಾಗಿ ಜೋಗ ಬರೆದ ಮುನ್ನುಡಿ, ನಟರಾಜ್ ಹುಳಿಯಾರ್ ಬರೆದ ಬೆನ್ನುಡಿಗಳನ್ನು ಓದಿಕೊಂಡು, ನಿಮ್ಮ ನಾಲ್ಕು ನಲ್ನುಡಿಗಳನ್ನು ಹಂಚಿಕೊಳ್ಳುವಿರಾ?
ನಲ್ಮೆ,
ಚೇತನಾ ತೀರ್ಥಹಳ್ಳಿ

ಚೇತನಕ್ಕೆ ಒಂದು ವರ್ಷ!?
ಒಂದು ವರ್ಷ!
ಅದೆನೂ ಹೆಚ್ಚಲ್ಲ ಬಿಡಿ. ಕಳೆದ ಎರಡು- ಮೂರು ವರ್ಷಗಳಿಂದ ಬ್ಲಾಗಿಂಗ್ ಮಾಡಿಕೊಂಡು ಒಮ್ಮೆಯೂ ಬೋರು ಎಂದು ಕೈ ಚೆಲ್ಲದೆ, ಮುನಿದುಕೊಳ್ಳದೆ ಕ್ರಿಯಾಶೀಲರಾಗಿರೋರು ಸಾಕಷ್ಟಿದ್ದಾರೆ.
ಆದರೂ…
ನನ್ನ ‘…. ಚೇತನ’ಕ್ಕೆ ಒಂದು ತುಂಬಿದ್ದೊಂದು ವಿಶೇಷ ಸಂಗತಿಯೇ!
ಯಾಕೆ ಗೊತ್ತಾ? ನಾನು ಬ್ಲಾಗು ಶುರು ಮಾಡಿದ್ದು ಇವತ್ತಿಗೆ (೨೮ ಜುಲೈ) ಸರಿಯಾಗಿ ಒಂದು ವರ್ಷದ ಹಿಂದೆ.
ಆದರೆ ರೆಗ್ಯುಲರ್ರಾಗಿ ಬರೀಲಿಕ್ಕೆ ಶುರು ಮಾಡಿದ್ದು ಅಕ್ಟೋಬರಿನಲ್ಲಿ. ಇನ್ನೂ ಮಜದ ವಿಷಯವೆಂದರೆ, ಮೊದಲ ಬಾರಿಗೆ ‘ಮುಚ್ಚುವೆ ಬ್ಲಾಗಿಲ’ ಅಂದಿದ್ದು ಎರಡೇ ತಿಂಗಳ ಅಂತರ- ಡಿಸೆಂಬರಿನಲ್ಲಿ!!
ಮತ್ತೂ ಮಜ….
ಡಿಲೀಟ್ ಬಟನ್ ಒತ್ತಿದ್ದು ಜೂನ್ ಮೊದಲ ವಾರದಲ್ಲಿ!!!
ಇದಲ್ಲವೆ ನನ್ನ ಸ್ಪೆಶಾಲಿಟಿ?
ನಾನು ಹಾಗೆಲ್ಲ ಯಾಕೆ ಮಾಡ್ತೀನಿ?
ಅಂತ ಬಹಳ ಯೋಚಿಸ್ತೀನಿ. ಏನೂ ಗೊತ್ತಾಗದೆ ಗಲಿಬಿಲಿಯಾಗ್ತೀನಿ. ನನ್ನ ಏಕಾಂತವನ್ನ ಕಳೆಗಟ್ಟಿಸೋದು ಈ ಬರಹ ಅನ್ನುವ ಸಂಗತಿ. ಹಾಗಂತ ಇಷ್ಟೂ ದಿನ ನಾನು ಸುಮ್ಮನೆ ಕುಂತಿದ್ದೆ ಅಂತಲ್ಲ, ಅದರೆ ಇಷ್ಟೂ ದಿನ ಇಲ್ಲಿ ಬರೆದದ್ದಕ್ಕೂ ಈಗ ನಾನು ಓದಲು ಶುರು ಹಚ್ಚಿರುವ ಸಂಗತಿಗೂ ಹದಿನಾರಾಣೆ ಸಂಬಂಧವೂ ಇಲ್ಲ. ಹಾಗಾಗಿ ಬ್ಲಾಗ್ ನಲ್ಲಿ ಬರೆಯುವ ಮೂಡ್ ಹೊರಟು ಹೋಗಿತ್ತು ಅಂದ್ಕೊಳ್ತೀನಿ.
ಈ ನಡುವೆ ನಾನು ಟೀನಾ ಕೊಟ್ಟ ‘ಬ್ಲಾಸ್ಪೆಮಿ’ ನಾವೆಲ್ ಓದಿದೆ. ಆ ಬಗ್ಗೆ ನಾವು ಚರ್ಚಿಸಲೇಬೇಕು. ನೀವು ರೆಡಿ ಅಂದರೆ ಆದಷ್ಟು ಬೇಗ ಅದೊಂದು ಪೋಸ್ಟ್ ಹಾಕುವೆ.
ಹಾಳು ರಾಜ್ಯ ರಾಜಕೀಯದ ಕುದುರೆಯಾಟ, ಕೇಂದ್ರದ ಎಡವಟ್ಟುಗಳು, ರಾಜ್ಯದ ಮೇಲೆ ಅದರ ಪ್ರತೀಕಾರಗಳು, ಸಾಲದ್ದಕ್ಕೆ ಸರಣಿ ಸ್ಫೋಟ, ಅಹಮದಾಬಾದಿನಲ್ಲಿ ನಲವತ್ತೊಂಭತ್ತು ಜನರ ಸಾಲು ಮರಣ, ಅಂವ ಹೇಳಿದ ಚಿಕ್ಕದೊಂದು ಸುಳ್ಳು… ಇವೆಲ್ಲ ನನ್ನ ಈ ದಿನಗಳಲ್ಲಿ ಬಹಳವಾಗಿ ಕಾಡಿದ ಸಂಗತಿಗಳು.
ಓಹ್! ನಿಮ್ಮ ಜತೆ ಹಂಚಿಕೊಳ್ಳಲು ಸಕಷ್ಟು ಸಮಾಚಾರ ಒಟ್ಟು ಮಾಡಿಕೊಂಡಿದ್ದೇನೆ ನಾನು. ‘ಪೋಟ್ಲೀ ಬಾಬಾ’ ನ ಹಾಗೆ ನನನ್ ಪೋಟಲಿಯಿಂದ ಒಂದೊಂದೇ ಕಥೆ ತೆಗೆಯುವೆ. ಸದ್ಯದಲ್ಲೇ ಊರಿಗೆ ಹೋಗ್ತೇನೆ. ಅಲ್ಲಿ ಸಖತ್ ಮಳೆಯಂತೆ! ಜೀವ ಎಳೀತಿದೆ ಗೊತ್ತಾ?
ಈ ಇವತ್ತಿನ ಪೋಸ್ಟು ‘ಅನೌಪಚಾರಿಕ.’ ಒಂದು ವರ್ಷ ಪೂರೈಸಿದ ‘ಮಹಾ(!?)’ ಸಾಧನೆಯ ಸೆಲೆಬ್ರೇಶನ್ನಿಗೆ!! ಇನ್ನಿದು ಎಷ್ಟು ದಿನ ನಡಿಯುತ್ತೋ… ಆ ಬ್ಲಾಗೇಶ್ವರನೇ ಬಲ್ಲ!


