ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ

ನೆನಪು ಕನಸುಗಳ ನಡುವೆ

Syndicate content
ನೆನಪನ್ನೆಲ್ಲಾ ಉಳಿಸಿಕೊಳ್ಳುತ್ತಾ,
ಕನಸಲೂ ನೆನಪನೇ ಗಳಿಸುತ್ತಲಿಹ
ಆಂತರ್ಯದ ನಡುವಣ ವಾಸ್ತವಸೇತುವೆಗೆ
ಹೆಸರಿಡಲಾಗದೇ ಹೆಸರು
"ನೆನಪು ಕನಸುಗಳ ನಡುವೆ"
URL: http://shantalabhandi.blogspot.com/
Updated: 1 hour 36 min ago

ಮುಸ್ಸಂಜೆ ಮನೆಯೊಳಗೆ...

Sat, 2008-09-06 00:29
ನಿತ್ಯ ಕಾಡುವ ಮುಸ್ಸಂಜೆ
ಮುಗಿದು ಮರಳುವ ಮಾಯೆ
ಅಂದದ ಅಂದಣದೊಳು
ಮಾಯುವ ಭಾಗ್ಯಕ್ಕೆ
ದಿನಾ ಬರುವುದೇಕೆ?
ಅಳಿಸುವುದಕ್ಕೆ!
ರಮಿಸುವುದಕ್ಕೆ?

ಗುಡ್ಡದಾಚೆಯ ಬಯಲ
ಅಂಬರದ ಅಂಬರ ಮಣಿ
ನಿತ್ಯ ಕಳೆದು
ಮೋಡದೋಕುಳಿಯಡಿ
ಹುಡುಕುತ್ತೇನೆ
ಆಗ ನೀನೂ ಬಾ
ತೆಗೆದುಕೋ ಅರ್ಧ ತುಮುಲಗಳ
ಮರಳಿಕೊಡು
ಆಯ್ದ ಅಶ್ರುಮಣಿಗಳ


ಮುಸ್ಸಂಜೆ ಜಾರದಂತೆ ಬದು ಹಾಕು
ಬೇಲಿಕಟ್ಟಿದರೂ ಸರಿಯೇ
ತರಗೆಲೆಯ ಸರಿಸಿ
ಬೆರಳಂಚು
ಮಣ್ಣ ಕೆದಕೆದಕಿದಂತೆ
ಮರಳಿ ಬಂದದ್ದೇಕೆ
ಹೋಗಿಬಿಡು
ಮಳೆಗಾಲದಿರಚಲು
ನಡುವಿನ ಗೋಡೆ ಬೀಳಿಸಿಹೋಗಿದ್ದಕ್ಕೆ
ಧನ್ಯವಾದ

ಮಣ್ಣ ಸುರಿದು ಮೈಮೇಲೆ
ಮಗೆ ಮಗೆದು ಒರೆಸೊರಸಿ
ರಮಿಸುವುದೇಕೆ
ಹೋದವನು ಮರಳಿಬರಬೇಡ
ಹನಿಯುವ ನೀರು ಹರಿಯುವುದಿಲ್ಲ
ಚೆಲ್ಲಿದ್ದು ಚೆಲ್ಲಾಪಿಲ್ಲಿ
ವಂದನೆಗಳು

ಖಾಸಗಿತನಕೊಂದಿಷ್ಟು ಖಾಸಗಿತನ
ಅದಲಿಬ್ಬರಿಗೂ
ಇದೆಯೊಂದು
ಇರದ ಸ್ಥಾನ
ಬದಲಿಗೆಬದಲಾಗಿದ್ದಕ್ಕೆ ಜಾಗ
ಇತ್ತ ತುತ್ತಿಗೆ ಮೀಸಲೊಂದಿಷ್ಟು ಸ್ಥಳ
ಆದಿಯಿರದ ಅಂತ್ಯಕ್ಕೆ ನಮಸ್ಕಾರ
ಬರುತ್ತಿರು
Categories: ಕನ್ನಡ ಪುಟಗಳು

ಯಾವ ಕವಿ ರಚಿಸಿದನೋ ಈ ಜಗದ ನಾಟಕವ...

Tue, 2008-09-02 23:55
ತುಂಬ ದಿನಗಳಿಂದ ಅವನಿಗೆ ಹೇಳ್ತಾನೇ ಇದ್ದೆ, ಯಾಕೋ ಬದುಕು ಬೇಜಾರಾಗಿದೆ, ದಿನಚರಿ ಬೇಸರ ಹುಟ್ಟಿಸಿದೆ, ನಂಗೆ ಸ್ವಲ್ಪ ಬದಲಾವಣೆ ಬೇಕು ಅಂತ. ದಿನಬೆಳಗಾದರೆ ಆಫೀಸು, ಅದೇ ಕೋಡಿಂಗ್ ಕೆಲಸ ನಾಲ್ಕುವರ್ಷದಿಂದ, ಕೆಲಸ ಬದಲಾಯಿಸೋಣವೆಂದರೆ ಅದೇನೇನೋ ಅನಾನುಕೂಲತೆ.( ಅವೆಲ್ಲ ಇಲ್ಲಿ ಬೇಡ ಬಿಡಿ.) ಬೆಳಿಗ್ಗೆ ಬೇಗ ಏಳು, ಏನಾದರೂ ತಿನ್ನು, ಸ್ನಾನ ಮಾಡು, ಯಾವ ಡ್ರೆಸ್ ಗೆ ಐರನ್ ಇದೆ ಅಂತ ಹುಡುಕು, ಲ್ಯಾಪ್ ಟಾಪ್ ಹೆಗಲಿಗೆ ಹೊತ್ತು ಓಡು ಇವಿಷ್ಟೇ ಆಗೋಗಿತ್ತು. ಅವನು ಏನೂ ಹೇಳ್ತಿರಲಿಲ್ಲ, ಅವನಿಗೂ ಇದೇ ದಿನಚರಿ ಬೇಸರವಾದವರ ಹಾಗೆ ಇರ್ತಿದ್ದ. ಬೇಜಾರಾಗಿ ಒಂದಿನ ಮ್ಯಾನೇಜರ್ ಹತ್ರನೂ ನನ್ನ ಗೋಳು ಹೇಳ್ಕೊಂಡುಬಿಟ್ಟೆ. ‘ಒಂದುವಾರ ರಜ ಕೊಡು, ಒಬ್ಬಳೇ ಎಲ್ಲಿಗಾದ್ರೂ ಹೋಗಿಬರ್ತೀನಿ’ ಅಂದೆ. ‘ಈ ತಿಂಗಳ ಕೊನೆಗೆ ಪ್ರಾಜೆಕ್ಟ್ ಡೆಡ್ ಲೈನ್ ಇದೆ, ಮುಗಿಸಿ ರಜ ತಗೋ’ ಅಂದುಬಿಟ್ಟಳಾಕೆ. ಸುಂಕದವರ ಮುಂದ್ಯಾಕೆ ಸುಖದುಃಖ ತೋಡಿಕೊಂಡ್ನೋ ಅನ್ನಿಸಿಬಿಟ್ಟಿತ್ತು. ಎರಡೇ ದಿನದಲ್ಲಿ ‘ಈ ಪ್ರಾಜೆಕ್ಟ್ ಗೆ ನನ್ನ ಟೀಮ್ ನಿಂದ ಯಾರಾದರೂ ಒಬ್ಬರು Lake Tahoe ಹೋಗ್ಬೇಕಾಗಿದೆ, ನೀನು ಹೋಗು’ ಅಂದಾಕೆ ಅಂದಾಗ ಖುಷಿಯಾಗಿತ್ತು. ‘ಬಗ್ಗಿದಂಗೂ ಆಯ್ತು, ಅಲ್ಲೇ ಅತ್ತೆಗೊಂದು ನಮಸ್ಕಾರವೂ ಆಯ್ತು’ ಅಂತ ಏಕಾಂತ ಅರಸಿ ಹೊರಟುಬಿಟ್ಟಿದ್ದೆ. ‘ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲೂ ಅನ್ನ’ ಆಗಿತ್ತು.

ಅಲ್ಲಿಹೋಗಿ ಆಫೀಸ್ ವತಿಯಿಂದ ಮೊದಲೆ ಬುಕ್ ಆಗಿದ್ದ Green Tree ಹೊಟೆಲ್ ಅಲ್ಲಿ ತಂಗಿದೆ. ಆಫೀಸು ಐದು ಮೈಲಿ ದೂರದಲ್ಲಿತ್ತು ಹೊಟೆಲ್ ನಿಂದ. ಒಂದುವಾರ ತುಂಬಾನೇ ಸೊಗಸಾಗಿತ್ತು ಸಂಜೆಯ ಏಕಾಂತದ ಸಾನ್ನಿಧ್ಯ. ಆಮೇಲೆ ಏಕಾಂತ ಬೇಜಾರು ಅನ್ನಿಸೋಕೆ ಹೆಚ್ಚುದಿನ ಬೇಕಾಗಲೇ ಇಲ್ಲ. ಆವತ್ತು ಸಂಜೆ ಆಫೀಸಿಂದ ಬರುವಾಗಲೇ ಸ್ನೋ ಫಾಲ್ ಶುರುವಾಯ್ತು. ಹೇಗೋ ಅಂತೂ ಇಂತೂ ಜೀವ ಕೈಯಲ್ಲಿ ಹಿಡಕೊಂಡು ಹೊಟೆಲ್ ರೂಮ್ ಸೇರಿದ್ದಾಯ್ತು. ಕಿಟಕಿಯ ಬಳಿ ನಿಂತು ಸ್ನೋ ಫಾಲ್ ನೋಡುತ್ತ ಬಿಸಿ ಬಿಸಿ ಕಾಫಿ ಹೀರ್ತಾ ಇದ್ದೆ. ಎಷ್ಟೆಲ್ಲ ದಿನದಿಂದ ಬಯಸಿದ ಏಕಾಂತ ಆವತ್ತು ಸಿಕ್ಕಂತೆ ಅನ್ನಿಸಿತ್ತು. ಹೊರಗೆ ಸ್ನೋ ಬೀಳ್ತಾನೇ ಇತ್ತು.


ಇವನೂ ಜೊತೇಲಿ ಇರಬೇಕಾಗಿತ್ತು, ಬಿಸಿ ಬಿಸಿ ಕಾಫಿ ಕುಡೀತಾ ಏನೂ ಮಾತಾಡ್ದೇ ಇಬ್ರೂ ಸುಮ್ನೆ ಕಿಟಕಿಯಿಂದ ಹೊರಗೆ ಸ್ನೋ ಬೀಳೋದನ್ನ ನೋಡ್ತಾ ಕೂತಿರಬಹುದಿತ್ತು ಅನ್ನಿಸ್ತು. ಕಾಲ್ ಮಾಡಿದ್ದೆ. ಇಬ್ಬರೂ ಏನೂ ಮಾತಾಡಿಕೊಳ್ಲಿಲ್ಲ. ‘ಲೇಖನ ಬರೆದಿದ್ದೆ,ಮೈಲ್ ಮಾಡಿದ್ದೇನೆ ನೋಡು’ ಅಂದ. ‘ನೀನ್ಯಾಕೆ ಒಂದು ಬ್ಲಾಗ್ ಮಾಡಿ ಅದರೊಳಗೆ ನಿನ್ನ ಬರಹಗಳನ್ನ ತುಂಬಿಡಬಾರದು?’ ಅಂತ ಕೇಳಿ ಕೇಳಿ ಸಾಕಾಗಿಹೋಗಿತ್ತು. ‘ನೋಡ್ತೀನಿರು’ ಅಂತ ಮೈಲ್ ಚೆಕ್ ಮಾಡಿದ್ದೆ. ಫೋನ್ ಕಾಲ್ ನಲ್ಲಿದ್ದುಕೊಂಡೇ ಲೇಖನ ಓದುತ್ತಿದ್ದೆ. ಅದ್ಯಾವಾಗ ಕಾಲ್ ಕಟ್ ಆಗಿತ್ತೋ ಗೊತ್ತಾಗ್ಲಿಲ್ಲ. ಅವನ ಮೈಲ್ ಗೆ ರಿಪ್ಲೈ ಮಾಡೋಣ ಅಂದ್ಕೊಂಡೆ . ‘ಲೇಖನ ಇಷ್ಟವಾಯ್ತು. ಒಂದು ಮಾತು ಹೇಳ್ತೀನಿ ನನಗನ್ನಿಸಿದ್ದು, ಪ್ಲೀಸ್ ಕೋಪ ಮಾಡ್ಕೋಬೇಡ. ಪ್ರತಿಭೆ ಬರಹವಾಗಿ ಮೂಡಬೇಕು, ಬುದ್ಧಿವಂತಿಕೆಯ ಪ್ರದರ್ಶನದಂತಿರಬಾರದು. ಯಾರ ಹಂಗಿಲ್ಲದೆಯೇ ಬರೆಯಬೇಕು ನಿಜ, ಬರವಣಿಗೆ ಇನ್ನೊಬ್ಬರನ್ನು ಹಂಗಿಸಬಾರದು ಅಷ್ಟೇ. ಬರಹಗಳು ತಣ್ಣಗೆ ಮನಸಿನೊಳಗೆ ಹರಿದಾಡಿ ಆಳವನ್ನ ತಲುಪುವಂತಿರಬೇಕು, ತಣ್ಣಗಿದ್ದರೂ ಕೊರೆಯಬಾರದು. ಬರಹದ ಬಿಸಿ ಮನಸನ್ನ ಬೆಚ್ಚಗಾಗಿಸಬೇಕು, ಇನ್ನೊಬ್ಬರನ್ನ ಸುಡುವಂತಿರಬಾರದು.’ ಎಂದಷ್ಟೇ ಬರೆದು ಇನ್ನೇನು ಕಳುಹಿಸಬೇಕು ಅನ್ನೋಷ್ಟರಲ್ಲಿ ಮನಸ್ಯಾಕೋ ‘ಹೀಗೆಲ್ಲ ಬರೆಯಬೇಡ, ಬೇಸರಿಸಿಕೊಂಡಾನು’ ಅಂತ ಹೇಳಿದ್ದರಿಂದ ಏನೂ ರಿಪ್ಲೈ ಮಾಡ್ದೆ ಸುಮ್ಮಗಾಗಿದ್ದೆ. ಹೊರಗೆ ಸ್ನೋ ಬೀಳುತ್ತಿರುವುದನ್ನ ಕ್ಲಿಕ್ಕಿಸಲಾಗಲೇ ಇಲ್ಲ. ಸ್ನೋಫಾಲ್ ನಿಂತ ಮೇಲಿನ ದೃಶ್ಯ ಹೀಗಿತ್ತು.











ಲ್ಯಾಪ್ ಟಾಪ್ ಮುಂದಿಂದ ಎದ್ದಾಗ ಕತ್ತಲಾಗಿತ್ತು. ಊಟ ಬೇಡವೆನ್ನಿಸಿತ್ತು. ಅರ್ಧ ಓದಿಟ್ಟಿದ್ದ ಪುಸ್ತಕದ ಐದಾರು ಪುಟಗಳನ್ನ ತಿರುವುತ್ತ ನಿದ್ರೆ ಹೋಗಿದ್ದೆ. ಇವೆಲ್ಲ ಆರು ತಿಂಗಳ ಹಿಂದಿನ ಕಥೆಯಾಗಿ ಇವತ್ತೀಗ ಆಫೀಸಿಂದ ಬರುವಾಗ ಮತ್ತೆ ಅವೆಲ್ಲ ನೆನಪಾಗ್ತಿದೆ. ಹದಿನೈದು ದಿನಗಳಿಂದ ಮತ್ತೆ ಬೇರೆ ಊರಿಗೆ ನನ್ನ ರವಾನಿಸಿದ್ದಾರೆ. ಇಲ್ಲಿಗೆ ಬಂದು ಹದಿನೈದು ದಿನಗಳಾಗ್ತಾ ಬಂತು. ಒಬ್ಬಳೇ ಇರುವುದ ಹಿತ, ಸುಖ, ಖುಷಿ ಅಂತೆಲ್ಲ ಅಂದುಕೊಂಡಿದ್ದು ಕರಗುವಷ್ಟು ಬೇಜಾರಾಗ್ತಿದೆ ಇಲ್ಲಿ. ಅವನಿಗೆ ಈ ವಾರಾಂತ್ಯ ಇಲ್ಲಿಗೆ ಬಾ ಅಂತ ಗೋಗರೆಯುತ್ತಿದ್ದೇನೆ. ದುರಾದೃಷ್ಟ ಅನ್ನುವಂತೆ ಅವನಿಗೆ ಈ ವಾರಾಂತ್ಯದ ಮೂರೂ ದಿನವೂ ರಜ ಇದ್ದರೂ ಆಫೀಸು ಕೆಲಸ ತಡೆದು ನಿಲ್ಲಿಸಿದೆ. ಒಬ್ಬಳೇ ಮೂರೂ ದಿನಗಳನ್ನೂ ಕಳೆಯುವುದು ನರಕವೆನ್ನಿಸ್ತಿದೆ. ಏಕಾಂತ ಸಾಕಪ್ಪ ಸಾಕು ಅನ್ನಿಸುವಂತಾಗಿದೆ. ಹೀಗೇ ಹೊಟೆಲ್ ರೂಮಿನ ಕಿಟಕಿಯಲ್ಲಿ ನಿಂತು ನೋಡುತ್ತಿದ್ದಂತೆ ಸಂಜೆ ಆವರಿಸಿಕೊಳ್ಳುತ್ತಲಿತ್ತು. ಒಬ್ಬಳೇ ಕುಳಿತು ಈ ಸೊಬಗನ್ನ ಸವಿಯೋದಕ್ಕಿಂತ ನೀವೂ ನನ್ನ ಜೊತೆಯಲ್ಲಿ ಪ್ರಕೃತಿಯ ಈ ಸೊಬಗನ್ನ ಸವಿಯಲಿ ಅನ್ನಿಸಿ ಈ ಕ್ಷಣ್ದಲ್ಲಿ ಕ್ಲಿಕ್ಕಿಸಿದ ಈ ಫೋಟೋಗಳು ನಿಮ್ಮ ಮುಂದೆ.





ಹೊಟೆಲ್ ರೂಮಿನ ಅರ್ಧ ತೆರೆದ ಕಿಟಕಿ ಹಾಗೂ ಅದರಾಚೆ ಮುಳುಗುತ್ತಿರುವ ಪೂರ್ತಿ ತೆರೆದ ಆಗಸ


ಕಣ್ಣು ಕಿಟಕಿಯ ಹೊರಗೆ, ಕೈ ಕೀಲಿಮಣೆ ಕುಟ್ಟುತ್ತಿದ್ದರೆ, ಕಿವಿ ಅಮ್ಮನ ಮಾತುಗಳನ್ನ ಆಲಿಸ್ತಿದೆ. ಮನಸು ಹಾಡ್ತಾನೇ ಇದೆ "ಯಾವ ಕವಿ ರಚಿಸಿದನೋ ಈ ಜಗದ ನಾಟಕವ"
ಅಮ್ಮನತ್ರ ಫೋನಲ್ಲಿ ಮಾತಾಡ್ತಾ ಇದ್ರೆ ಆ ಕಡೆಯಿಂದ ಅಮ್ಮ ಕೇಳ್ತಿದಾರೆ ‘ಹೊಟೆಲಿನಲ್ಲಿದ್ದೀಯ ಅಂತೀಯ,ಗೌರಿಪೂಜೆ ಯಾವಾಗ ಮಾಡ್ತೀಯಾ?’ ಅಂತ. ನಾನೂ ಯೋಚಿಸ್ತಿದ್ದೇನೆ ‘ಹೌದು .. ಈ ಸಲದ ಗೌರಿಪೂಜೆ ಯಾವಾಗ ಮಾಡೋದು!’ ಅಂತ.
Categories: ಕನ್ನಡ ಪುಟಗಳು

ಮರೆವಿನೊಳಗಿನ ಅರಿವು

Wed, 2008-08-27 00:01
ಹೀಗೊಂದು ದಿನ
ಮನೆ ಬಿಟ್ಟದಾರಿ
ಆ ಮನೆಗೂ ಕೀಲಿ
ಕರೆಗಂಟೆ ಕೂಗಿ
ಆಕೆ ಬಾಗಿಲ ತೆರೆದು
ಒಳಗಡಿಯಿಟ್ಟೆ
ಹಿಂದೊಮ್ಮೆ ಗುಡಿಸಿ ರಂಗೋಲೆಯಿಟ್ಟ
ಚಿಕ್ಕ ಚೊಕ್ಕ ಮನೆ

ಎಲ್ಲ ಹಾಗೆಯೇ ಇದೆ
ನನ್ನ ಜಾಗಕ್ಕಿವಳ ಬಿಟ್ಟರೆ!
ಬದಲಾವಣೆಯೇ ಇಲ್ಲ
ಚಪ್ಪಲಿ ಬಿಡಲೂ ಜಾಗವಿಲ್ಲ
ಅವಳ ಜೋಡು ಅಲಂಕರಿಸಿಬಿಟ್ಟಿದೆ

ಒಳಗಿಣುಕಿ ನೋಡಿದರೆ
ಜಾಗವೇ ಇಲ್ಲ
ಅವಳದೇ ಎಲ್ಲ!!
ಹೊಟ್ಟೆ ಉರಿ ಉರಿದು
ಸುಡುವಾಗಲೇ ಕೇಳಿದೆ
"ನೀನ್ಯಾರೆ ಈ ಮನೆಗೆ
ಎಲ್ಲ ಆಕ್ರಮಿಸಲು?
ಆಣತಿಯಿತ್ತವರು ಯಾರು ನಿನಗೆ?"

ಹೇಳಿದಳು
"ನಾವು ಇತ್ತೀಚೆಗೆ ಬಂದ ಬಾಡಿಗೆದಾರರು
ಇಲ್ಲಿ ಮೊದಲಿದ್ದವರು ನೀವೆಯೋ ಹೇಗೆ?"
ತಣ್ಣಗೆ ಅವಳು ನಕ್ಕಾಗಲೇ ಸಣ್ಣಗಾದೆ
ಸಣ್ಣಗೆ ಉಲಿದೆ
"ಹೌದು...ಈ ಮನೆ ಖಾಲಿ ಮಾಡಿ
ಹೊಸಮನೆಗೆ ಹೋದೆವು
ತಿಂಗಳಾಚೆಯ ಹಿಂದೆಯೇ..." ಎಂದು.
Categories: ಕನ್ನಡ ಪುಟಗಳು

ಸರಿದುಹೋದನೇ "ಸ್ವರಭಾಂಧವ"...?

Sun, 2008-08-24 01:22
ಪ್ರತಿವರ್ಷದಂತೆ ಕಾಲೇಜು ಆರಂಭವಾಗಿದೆ ಅಂದಷ್ಟೇ. ಕ್ಲಾಸಲ್ಲಿ ಕುಳಿತು ಪಾಠ ಕೇಳುವಾಗಿನ ಮಳೆ ಹೊರಬಂದಾಗ ಇರಲಿಲ್ಲ. ಗೆಳತಿ ಮ್ಯೂಸಿಕ್ ಕ್ಲಾಸಿಗೆ ಹೋದರೆ ಅವಳು ಜಿಮುರುವ ಮಳೆಗೆ ತಂಪಾಗುತ್ತ ಲೈಬ್ರರಿಯ ಕಡೆ ಕಾಲು ಹಾಕುತ್ತಿದ್ದಾಗಲೇ ಒಬ್ಬರು ಎದುರಾಗಿ ಅವಳನ್ನ ನಿಲ್ಲಿಸುತ್ತಾರೆ. "ನನ್ನ ಹೆಸರು ...., ನಾನು ಸಂಗೀತ ವಿಧ್ಯಾರ್ಥಿ. ಸಂಗೀತ ವಿಭಾಗದ ವತಿಯಿಂದ ಮೂರು ವರ್ಷಗಳಿಂದ ಪಾಕ್ಷಿಕ ಪತ್ರಿಕೆಯೊಂದನ್ನ ನಡೆಸಿಕೊಂಡು ಬಂದಿದ್ದೆ. ಪದವಿ ಮುಗಿಸಿ ಇದೀಗ ತೆರಳುತ್ತಿದ್ದೇನೆ, ಆ ಪತ್ರಿಕೆಯನ್ನ ನೀನು ಮುಂದುವರೆಸುತ್ತೀಯ ದಯವಿಟ್ಟು? ಇಲ್ಲವಾದರೆ ಆ ಪತ್ರಿಕೆ ನನ್ನ ಬೆನ್ನಿಗೇ ಹೇಳುವ ಹೆಸರಿಲ್ಲದೆ ಹೋಗುತ್ತದೆ, ಕೊನೆಯ ಪಕ್ಷ ನೀನು ಈ ಕಾಲೇಜಲ್ಲಿರುವ ತನಕವಾದರೂ ನಮ್ಮ ಈ ಪತ್ರಿಕೆಯ ಜವಾಬ್ಧಾರಿ ಹೊತ್ತುಕೊಳ್ಳುವೆ ಎಂಬ ಭರವಸೆಯಿಂದ ಕೇಳುತ್ತಿದ್ದೇನೆ" ಎನ್ನುವಾಗ ಧ್ವನಿಯಲ್ಲಿ "ಸ್ವರಭಾಂಧವ"ದ ಬಗ್ಗೆ ಗೌರವ ತುಂಬಿ ಬರುತ್ತಿದೆ, ಆ ಪತ್ರಿಕೆ ನಿಲ್ಲಬಾರದು ಎಂಬ ನೋವಿದೆ. ಪರಿಚಯವೇ ಇಲ್ಲದ ಧ್ವನಿ. ಆದರೂ ಆಪ್ತತೆ. "ನಂಗೆ ಸಂಗೀತ ಅಂದ್ರೆ ಏನು ಅಂತಾನೂ ಗೊತ್ತಿಲ್ಲ, ನಾನು ಹೇಗೆ ಈ ಪತ್ರಿಕೆಯ ಜವಾಭ್ಧಾರಿ ಹೊರಲಿ, ಅದಕ್ಕೆ ಸರಕನ್ನ ಎಲ್ಲಿಂದ ತರಲಿ?" ಅಂದವಳ ಪ್ರಶ್ನೆಗೆ ಸಿಕ್ಕ ಉತ್ತರ "ಸಂಗೀತದ ಸರಕುಗಳೇ ಬೇಕಂತಿಲ್ಲ, ಅದರೊಳಗಿನ ಸಾಹಿತ್ಯವನ್ನ ಉಳಿಸಿಕೊಂಡು ಹೋಗು ತಕ್ಕಮಟ್ಟಿಗೆ, ನಿನ್ನ ಕೈಲಾದ ಮಟ್ಟಿಗೆ" ಈಗವಳಿಗೆ "ಆಗೋಲ್ಲ" ಅನ್ನುವುದಾಗುತ್ತಿಲ್ಲ. "ಸರಿ" ಅಂತ ಗೋಣಲ್ಲಾಡಿಸುತ್ತಾಳೆ.

ಹೋಗಿ ಗೆಳತಿಯರನ್ನೆಲ್ಲ ಕೇಳುತ್ತಾಳೆ "ಈ ಪತ್ರಿಕೆಯನ್ನ ನಮ್ಮ ಕೈಲಾದ ಮಟ್ಟಿಗೆ ಉಳಿಸಿಕೊಂಡು ಹೋಗೋಣವಾ?" ಯಾರೂ‘ಇಲ್ಲ’ ಅನ್ನುವುದಿಲ್ಲ. ಕುಳಿತು ಹೀಗೆ ಬರೆಯುತ್ತಾಳೆ:-

"ಸಹೃದಯರೇ...

ವರ್ಷಕ್ಕೆ ಹರುಷಗೊಂಡ ಮಯೂರ ಗರಿಬಿಚ್ಚಿ ನಲಿವಂತೆ, ವಸಂತಕ್ಕೆ ಕೋಗಿಲೆ ತನ್ನಿರುವ ಸೂಚ್ಯ ಕೊಡುವ ಪರಿಯಲ್ಲಿ ಹಾಡುವಂತೆ, ಮಾಸದ ಆರಂಭದಲ್ಲೊಮ್ಮೆ ನಮ್ಮ "ಸ್ವರ ಭಾಂಧವ"ನ ಆಗಮನವಾಗಲಿದೆ.
ಉದಯೋನ್ಮುಖ ಕವಿ-ಕವಿಯಿತ್ರಿ-ಲೇಖಕ-ಲೇಖಕಿ ಬರಹಗಾರರಿಂದ ಉದಯಿಸಿದ ಬರಹಗಳಿಗೆ "ಸ್ವರಭಾಂಧವ"ನ ಸ್ವಾಗತ.

ಇಂದಿನಿಂದ ಆಗಮಿಸುತ್ತಲಿರುವ "ಸ್ವರ ಭಾಂಧವ"ನ ಸ್ವರವು ಸುಶ್ರಾವ್ಯವಾಗಿ ತೇಲಬೇಕಾದಲ್ಲಿ ಬರಹಗಾರ ಭಾಂಧವರೇ ನಿಮ್ಮೆಲ್ಲರ ಸಹಕಾರ ಸದಾ "ಸ್ವರ ಭಾಂಧವ"ನ ಸಂಪಾದಕೀಯ ವರ್ಗಕ್ಕಿದೆಯೆಂಬ ಅಚಲ ವಿಶ್ವಾಸದೊಂದಿಗೆ...

ಸೂರ್ಯನ ಕಿರಣಗಳ ಹೊಮ್ಮುವಿಕೆಗೇ ಅವಕಾಶ ಕೊಡದೇ ಎಡೆಬಿಡದ ವರ್ಷನ ಆರ್ಭಟವನ್ನು ನೋಡುತ್ತಿದ್ದೀರಲ್ಲಾ? ಹಠ ಹಿಡಿದು ಪಕ್ಷ ದಿನಗಳ ಕಾಲ ಇಳೆಯನ್ನ ತೋಯಿಸುತ್ತಿದ್ದಾನೆ.
ಕ್ಲಾಸುಗಳಲ್ಲಿ ಮುಂದಿನ ಡೆಸ್ಕುಗಳಲ್ಲಿ ಆಸೀನರಾದವರಿಗೆ ವರ್ಷನ ದರ್ಶನವಾದರೆ ಹಿಂದೆ ಕುಳಿತವರ ಕಿವಿಗಳಲ್ಲೆಲ್ಲ ಮಳೆರಾಯನ ಹರ್ಷದ ಸುಶ್ರಾವ್ಯ ಗಾಯನ.
ಅಬ್ಬಬ್ಬಾ! ಗಾಳಿ!! ಮಳೆ!!! ಚಳಿಯಲ್ಲವೇ!!!! ಅದಕ್ಕೇ ಇರಬೇಕು ನಮ್ಮ "ಸ್ವರಭಾಂಧವ" ಹೊದ್ದು ಬೆಚ್ಚಗೆ ಮಲಗಿದ್ದನಿರಬೇಕು. ಹಿಂದೆಲ್ಲ ಸದಾ ಕಾರ್ಯನಿರತನಾಗಿದ್ದು ಹದಿನೈದು ದಿನಗಳಿಗೊಮ್ಮೆ ತನ್ನ ಕಾರ್ಯಫಲವನ್ನು ವರದಿ ಮಾಡುತ್ತಿದ್ದ "ಸ್ವರ ಭಾಂಧವ"ನಿಗೆ ವಿಶ್ರಾಂತಿ ನೀಡಿದ್ದಾಗಿದೆ, ಇನ್ನಾದರೂ ಅವನನ್ನು ನಿದ್ರೆಯಿಂದೆಬ್ಬಿಸಬೇಕಲ್ಲವೇ?
ಪುನಃ ಎಚ್ಚೆತ್ತುಕೊಂಡು ಓದುಗರ ಇದಿರು ದರ್ಶನ ನೀಡಲಿದ್ದಾನೆ "ಸ್ವರಭಾಂಧವ"

ನಿಮ್ಮೆಲ್ಲರ ಸಹಕಾರ ಕೋರುತ್ತ,
-ಸಂಪಾದಕಿ.

"ಸ್ವರಭಾಂಧವ" ಪತ್ರಿಕೆಯ ಸಂಪಾದಕೀಯ ಬಳಗದಲ್ಲಿ

ಉಪಸಂಪಾದಕಿ:- ಶ್ಯಾಮಲಾ ಹೆಗಡೆ ಜಾನ್ಮನೆ.
ಲತಾ ಹೆಗಡೆ.
ಶಾಂತಲಾ ಡಿ ಹೆಗಡೆ
ಉಪಸಂಪಾದಕ:- ರಾಘವೇಂದ್ರ ಬೆಟ್ಟಕೊಪ್ಪ
ಕಲೆ ಮತ್ತು ಬರಹ:- ಅಂಜಲಿ ಹೆಗಡೆ
ಸಂಪಾದಕಿ:-??????
****************************************************************************

ಹೀಗೆ ಸಂಪಾದಕೀಯ ಬರೆದ ನಾಲ್ಕೆಂಟು ದಿನಗಳಲ್ಲಿ ಎಚ್ಚೆತ್ತು ಬರುತ್ತಾನೆ ಸ್ವರಭಾಂಧವ.

ಭಾಂಧವರೇ...
ಅಭಿನಂದನೆಗಳು
ಹಲವಾರು ಶ್ರೋತೃಗಳು "ಸ್ವರಭಾಂಧವ"ನ ಕರೆಗೆ ಓಗೊಟ್ಟಿದ್ದಾರೆನ್ನಲು ಸಂತಸ. ವಾಸ್ತವದಲ್ಲಿ ಹಿಂದೆಲ್ಲ "ಸ್ವರಭಾಂಧವ"ನ ಹಿನ್ನೆಲೆಯಲ್ಲಿ ಸಂಗೀತದ ವಿದ್ಯಾರ್ಥಿಗಳೇ ಇದ್ದು, ಸಂಗೀತಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿ "ಸ್ವರಭಾಂಧ"ವ ಸಂಗೀತಗಾರನೂ ಆಗಿದ್ದ. ತಮ್ಮೆಲ್ಲ ಸಮ್ಮಿಶ್ರ ಸಹಕಾರದಿಂದ "ಸ್ವರಭಾಂಧವ"ನ ಸಾಹಿತ್ಯವನ್ನಾದರೂ ಉಳಿಸಿಕೊಳ್ಳುವ ಪುಟಾಣಿ ಪ್ರಯತ್ನವೊಂದನ್ನು ಮಾಡುತ್ತಿದ್ದೇನೆ. ಅಲ್ಪ ಮಟ್ಟಿನ ಯಶನ್ನನ್ನು ಪಡೆವಲ್ಲಿ ಬೃಹತ್ ಸಹಕಾರ ನೀಡಿದ ನಿಮ್ಮೆಲ್ಲರಿಗೂ ಅನಂತ ವಂದನೆಗಳು.

ವಿಷ್ಣುನಾಯ್ಕರ ಪರಿಚಯ ನೀಡುವ ಜೊತೆಯಲ್ಲಿ ಪರಿಚಯವಾಗುತ್ತಿರುವ ಪಲ್ಲವಿ ಆಲ್ಮನೆ,ಸ್ವರಭಾಂಧವ ಬಳಗವನ್ನು ನಿರಾಸೆಗೊಳಿಸದೆ ಸಹಕಾರ ನೀಡಿರುವ ಪ್ರಭಾ ಹೆಗಡೆ, ಸದಾ ಜಟಿಪಿಟಿಯಾಗಿ, ಉತ್ಸಾಹದ ಚಿಲ್ಮೆಗಳಂತಿರುವ ಪತ್ರಿಕೋದ್ಯಮದ ವಿಧ್ಯಾರ್ಥಿಗಳಾದ ರಷ್ಮಿ ಹೆಗಡೆ, ಪೂರ್ಣಿಮಾ ಭಟ್, ಬೀನಾ ಹೆಗಡೆ ಇವರೆಲ್ಲರ ಸಹಕಾರಕ್ಕೆ ಋಣಿಯಾಗಿದ್ದೇನೆ.
ಸರ್ವರ ಲೇಖನಿಗಳಿಂದ ಜಾರಿದ ಭಾವನೆಗಳಿಗೆ ಸ್ವಾಗತ ಕೋರುವ ಸ್ವರಭಾಂಧವನ ಸಂಪಾದಕ ಬಳಗಕ್ಕೆ ತಮ್ಮೆಲ್ಲರ ಸಹಕಾರ ಬಯಸುತ್ತ...
-ಸಂಪಾದಕಿ.

ಅಂತೆಲ್ಲ ಬರೆದು ಪತ್ರಿಕೆಯನ್ನ ಮುನ್ನಡೆಸಿದವಳು, ಸಂಪಾದಕಿ(?) ಎಂಬ ಹೊಣೆಹೊತ್ತವಳು ವರ್ಷ್ಯಾಂತ್ಯದಲ್ಲಿ ಕಳೆದು ಹೋಗುತ್ತಾಳೆ ಅಷ್ಟುದಿನತನಕ ಆ ಪತ್ರಿಕೆಯ ನಡೆಸಲು ಸಹಕರಿಸಿದ ಎಲ್ಲರನ್ನೂ ನೆನೆಯುತ್ತ. ಸರಿದು ಹೋದ "ಸ್ವರಭಾಂಧವ"ನಲ್ಲಿ ಸದಾ ಕ್ಷಮೆಯಾಚಿಸುತ್ತಾ...
ಕೊನೆಯ ಸಂಪಾದಕೀಯ ಬರೆದ ನೆನಪವಳಿಗೆ ಬರುವುದೇ ಇಲ್ಲ, ಬಹುಷಃ ಕೊನೆಯ ಸಂಪಾದಕೀಯ ಕಾಣದೆಲೇ "ಸ್ವರಭಾಂಧವ" ಕಣ್ಮರೆಯಾದನಾ! ಅಂತ ಯೋಚಿಸುತ್ತಾಳೆ ಆಗಾಗ. ಕ್ರಮೇಣ "ಸ್ವರ ಭಾಂಧವ" ಮುಂದೇನಾದ ಎನ್ನುವುದನ್ನು ಸಂಪೂರ್ಣ ಮರೆತುಹೋದವಳಿಗೆ ಈಗೀಗ ಸ್ವರಭಾಂಧವನ ನೆನಪು ಪದೇ ಪದೇ ಕಾಡುತ್ತದೆ. "ಸ್ವರಭಾಂಧವ"ನ ಸುಳಿವೇ ಸಿಗುವುದಿಲ್ಲ. ಕಳೆದು ಹೋಗಿದ್ದು "ಸ್ವರ ಭಾಂಧವ"ನಾ ಅಥವಾ ಅದರ ಹೊಣೆ ಹೊತ್ತ ಸಂಪಾದಕಿಯಾ? ಹುಡುಕುತ್ತ ಹೋದಂತೆ ಎಲ್ಲವೂ ಕಳೆದೇ ಹೋಗುತ್ತವೆ. ಹಾಗೆ ಹುಡುಕಲೇಬಾರದು, ಅವಳೂ ಕಳೆದುಹೋಗಿದ್ದಾಳೆ, ಹುಡುಕಿದಷ್ಟೂ ಕಳೆದು ಹೋಗುತ್ತಾಳೆ.
Categories: ಕನ್ನಡ ಪುಟಗಳು

ನೆನಪುಗಳ್ಯಾಕೆ ಮರೆಯುವುದಿಲ್ಲ?

Mon, 2008-08-18 23:53
ರಸ್ತೆಯ ಪಕ್ಕದಲ್ಲಿ ಮನೆಯೆದುರಿನ ತೆಂಗಿನ ಗಿಡಕೆ ಒರಗಿ ನಿಂತು ಮಗಳು ಬರುವುದನ್ನೇ ಕಾದು ನಿಂತು ಅಗೋ ರಸ್ತೆಯ ಆ ತುದಿಯಲ್ಲಿ ಮಗಳ ಮುಖ ಕಂಡ ಕ್ಷಣದಲ್ಲಿ ಅದೆಷ್ಟು ಖುಷಿಯಿರುತ್ತಿತ್ತು ಅಮ್ಮನ ಮೊಗದಲ್ಲಿ. ಅಮ್ಮ ಮಗಳನ್ನೆತ್ತಿ ಮುದ್ದಿಡುತ್ತಿದ್ದರಲ್ಲ! ಆಗೆಲ್ಲ ಅಮ್ಮನಿಗೆ ಏನು ಸಿಗುತ್ತಿತ್ತು? ಆ ಸಂತಸದ ಪ್ರೀತಿಯ ನಾನ್ಯಾಕೆ ಹಿಡಿದಿಟ್ಟುಕೊಳ್ಳಲಿಲ್ಲ?


ಶಾಲೆಯಿಂದ ನಡೆದು ಬರುತ್ತ ಓಣಿಯೊಳಗೆ ಹರಿಯುತ್ತಿದ್ದ ನೀರ ದಾಟುವಾಗ ಅಚಾನಕ್ ಜಿಗಣೆಯೊಂದು ಕಾಲಿಗೆ ಅಂಟಿಕೊಂಡು ಅದೇನಂತ ಗೊತ್ತಾಗದೇ ಅತ್ತರೆ ಅದೇ ರಸ್ತೆಯಲ್ಲಿ ಅಲ್ಲೆಲ್ಲೋ ನಡೆದು ಹೋಗುತ್ತಿದ್ದ ಮಂಜಿ ಅವಳ ಬಾಯೊಳಗಿನ ತಂಬಾಕಿನ ತಾಂಬೂಲದ ರಸ ಉಗುಳಿ ಪುಟ್ಟ ಕಾಲಿಂದ ಜಿಗಣೆ ಬಿಡಿಸಿ ‘ಶಣ್ಣಮ್ಮ, ಜಿಗಣೆ ಅದೂ..ರಕ್ತ ಹೀರ್ಬುಡ್ತಿತ್ತು ನಾ ಬರ್ದಿದ್ರೆ....’ ಅನ್ನುತ್ತ ಮುದ್ದಿಸಿದ ಮಂಜಿಯ ಪ್ರೀತಿಯ ನಾನ್ಯಾಕೆ ಹಿಡಿದಿಟ್ಟುಕೊಳ್ಳಲಿಲ್ಲ?

ನೋಡೋಕೆ ಪಾಟಿಕಡ್ಡಿ ಹಾಗಿದ್ದರೂ ಅಕ್ಷರ ಮಾತ್ರ ಗುಂಡಗೆ ಬರೆದಾಗೆಲ್ಲ ಹಣೆಗೊಂದು ಮುತ್ತಿತ್ತು ‘ಚಂದ ಬರೇತ್ಯಲೇ ಕೂಸೆ, ಇನ್ನೂ ಚಂದ ಬರೆಯೂಲೆ ಟ್ರೈ ಮಾಡೋ’ ಅಂದ ಮಾಸ್ತರರ ಪ್ರೀತಿಯ ನಾನ್ಯಾಕೆ ಹಿಡಿದಿಟ್ಟುಕೊಳ್ಳಲಿಲ್ಲ?

ಮನೆಗೆಲಸಕ್ಕೆ ಬರುತ್ತಿದ್ದ ಮಾತಾಡಲೇ ಬಾರದ ‘ಹಾದಿ’ ಎಂಬ ಪ್ರೀತಿಯ ಹೆಣ್ಣಿನ ಮುಂದೆ ಒಂದಿಷ್ಟು ಪ್ರಶ್ನೆ ಕೇಳುವಾಗೆಲ್ಲ ನನಗ್ಯಾಕೆ ಗೊತ್ತಿರಲಿಲ್ಲ ಅವಳು ಮೂಗಿ ಎಂದು? ನಾ ಚೆಲ್ಲಿದ ಪ್ರಶ್ನೆಗೆಲ್ಲ ‘ಅ ಆ’ ಕಾರದಲ್ಲೇ ಉತ್ತರವಿಟ್ಟು ಮುಗ್ಧವಾಗಿ ಅವಳು ನಕ್ಕು ಈ ಪುಟ್ಟ ತಲೆಯ ನೇವರಿಸಿದ ಪ್ರೀತಿಯ ನಾನ್ಯಾಕೆ ಹಿಡಿದಿಟ್ಟುಕೊಳ್ಳಲಿಲ್ಲ? ಅವಳ ಭಾಷೆಯ ನಾನ್ಯಾಕೆ ಕಲಿತುಕೊಳ್ಳಲೇ ಇಲ್ಲ?

ಬೆಳೆದಂತೆ ಬೆಳೆದಂತೆ ಅಪ್ಪನಿಗೆ ಗೆಳತಿಯಾಗಿ, ಸಲಹೆ ಕೇಳುತ್ತ-ಸಲಹಿಸುತ್ತ, ಕವಿತೆ ಬರೆದು ಅಪ್ಪನ ಮುಂದೆ ಓದಿ ಆ ಕವಿತೆಗೆ ಹೀಗೆ ಸ್ಟೆಪ್ಸ್ ಹಾಕಬಹುದು ಅಂತೆಲ್ಲ ನಲಿದು ತಮಾಷೆ ಮಾಡುವಾಗ ನಕ್ಕಾಗಿನ ಅಪ್ಪನ ಖುಷಿಯ ನಾನ್ಯಾಕೆ ಹಿಡಿಟ್ಟುಕೊಳ್ಳಲಿಲ್ಲ?

ಒಂದು ತುತ್ತನ್ನ ಮೂವತ್ತೆರಡುಸಲ ಅಗಿದು ನುಂಗೆನ್ನುವ ಅಪ್ಪನ ಮಾತನ್ನ ಶಿರಸಾವಹಿಸಿ ಪಾಲಿಸಿದ ಮಗಳನ್ನ ‘ನೀನು ಇಷ್ಟು ನಿಧಾನಕ್ಕೆ ಊಟ ಮಾಡಿದ್ರೆ, ನಾಳೆ ಗಂಡನಮನೆಗೆ ಹೋದ್ರೆ ಅಲ್ಲಿ ಉಳಿದೆಲ್ಲ ಕೆಲಸ ಮಾಡಿದಂಗೆ, ದೇವ್ರೇ ಗತಿ!!’ ಅಂತಂದ ಅಮ್ಮನ ಹುಸಿಗೋಪದ ಪ್ರೀತಿಯ ನಾನ್ಯಾಕೆ ಹಿಡಿದಿಟ್ಟುಕೊಳ್ಳಲಿಲ್ಲ?

ನಾಲ್ಕು ಗಾಲಿಯ ಮುಚ್ಚಿದ ಗೂಡೊಳಗಿವನು ಕೂತು ನಾನು ಕೈಯ್ಯಾಡಿಸಿ ಬಾಯ್ ಅಂದಾಗ ಅವನು ‘ಬಾಯ್’ ಅಂದದ್ದು ಅವನ ವಾಹನದ ಕಪ್ಪು ಗಾಜಿನಾಚೆಗೆ ಕಾಣದೇ ಹೋದಾಗೆಲ್ಲ ಅಂದುಕೊಳ್ಳುತ್ತೇನೆ, ಆವತ್ತು ಟೂವ್ಹೀಲರ್ ಅಲ್ಲಿ ಕೂತು ಮನೆ ಬಾಗಿಲಿಂದ ಬಾಯ್ ಹೇಳುತ್ತ ಅರ್ಧ ಕಿಲೋಮೀಟರ್ ದೂರ ನಡೆದು ರಸ್ತೆ ತಿರುವು ಕಂಡ ಮೇಲೂ ಮೂಲೆಯಂಗಡಿಯ ಎರಡು ಕಟ್ಟಡಗಳ ನಡುವಿನ ಇಷ್ಟೇ ಇಷ್ಟು ಗ್ಯಾಪ್ ಮುಂದೆ ಗಾಡಿ ನಿಲ್ಲಿಸಿ ನನ್ನತ್ತ ಕೈಮಾಡಿ ಮುಂದೆ ನಡೆಯುತ್ತಿದ್ದ ಇದೇಗೆಳೆಯನ ಪ್ರೀತಿಯ ಅಂದು ನಾನ್ಯಾಕೆ ಹಿದಿದಿಟ್ಟುಕೊಳ್ಳಲಿಲ್ಲ? ಈಗೀಗ ಅವನು ತಿರುವು ದಾಟುವವರೆಗೆ ಅವಗೆ ಕಾಯುತ್ತ ಅಲ್ಲಿ ನಾನ್ಯಾಕೆ ನಿಲ್ಲುವುದಿಲ್ಲ?

ಎಲ್ಲವೂ ಬದಲಾಗುತ್ತದೆ ಕಾಲದೊಂದಿಗೆ, ಇಂದಿನ ಪ್ರೀತಿಯ ರೀತಿ ನಾಳೆ ಬದಲಾಗುತ್ತದೆ. ಕೊನೆಯಲ್ಲಿ ಯಾರ ಪ್ರೀತಿಯೂ ದಕ್ಕುವುದೇ ಇಲ್ಲ,ಮೊದಲೇ ಎಲ್ಲವನ್ನೂ ಬಾಚಿ ಹಿಡಿದಿಟ್ಟುಕೊಂಡುಬಿಡಬೇಕು.
Categories: ಕನ್ನಡ ಪುಟಗಳು

ಅಮ್ಮ ಕನಸಲ್ಲಿ ಬಂದು...

Fri, 2008-08-15 02:03
ಮಲೆನಾಡ ಮಳೆಯ ಭೀತಿಗೆ
ಮುದುಡಿ ಮರದಡಿ ಕೂತೆ
ಮನೆಯ ಹಾದಿ ಮಂಕಾಗಿದೆ
ನೆಲ ಮುಗಿಲ ತುಂಬೆಲ್ಲ ಮೋಡ ಮುಸುಕಿದೆ
ಮನಸೂ ಅಷ್ಟೇ ...

ಚಂದದ ಹಸಿರು ಸೀರೆಯನುಟ್ಟವಳು
ನನ್ನೆಡೆಗೆ ಬಂದಳು
ಅದೇ ಮರದಡಿ ಅವಳೂ
ಮಾತಾಡಲಿಲ್ಲ
ಅಮ್ಮನ ನೆನಪಾಯಿತು
ಅವಳತ್ತ ಸರಿದೆ ಆಶ್ರಯ ಎಂಬಂತೆ
??????ಅವಳ ಕಣ್ಣಿನ ಪ್ರಶ್ನೆ
ಕಣ್ಣೊಡೆದು ನೀರು ಬಂತು
ಅವಳೇನ ಕೇಳಿದಳು?
ನಾನೇನ ಹೇಳಲಿ?

ಅಲ್ಲಲ್ಲಿ ಹರಿದರೂ ಹಸಿರು ಸೀರೆ
ಮಾಸಿರದ ಹೂವಿನ ಬಣ್ಣ
ಇಲ್ಲೊಂಚೂರು ತೇಪೆ ಹಾಕಿಕೋ ಅಂದೆ
‘ನೀನೇ ಹಾಕು, ನೀವೇ ಹರಿದದ್ದು’
ಅಂದವಳ ಮುಗುಳ್ನಗುವಲ್ಲಿ
ನೂರು ನೋವು
ಒಡಲೊಳಗೆ ಬೆಂಕಿ
ಮಡಿಲೊಳಗೆ ನಲಿವ ನವಿರು ಹಸಿರು

ಅವಳೆದೆಗೆ ಆನಿಕೊಂಡೆ
ದುಃಖ ಒತ್ತರಿಸಿ
ಮೆತ್ತನೆಯ ಮನದೊಳಗೆ
ಯಾರೋ ನಿಂತಿದ್ದಾರೆ ಬಂದೂಕು ಹಿಡಿದು
ಬಂದೂಕಿನ ಮೊನಚವಳ ತಿವಿದ ಸದ್ದು
ಅಲ್ಲೆಲ್ಲೋ ಕಳ್ಳ ಕನ್ನ ಕೊರೆಯುತ್ತಿಹನು
ಊಟಸಿಗದವರು ಅಳುವ ಸದ್ದು
ಇವರೆಲ್ಲ ‘ಡರ್ರ’ನೆ ತೇಗುವಲ್ಲಿ
ಅವರು ‘ಗೊರ್ರ’ನೆ ಗೊರೆವಲ್ಲಿ ಕೇಳಿಸಲಿಲ್ಲ
ಅವಳು ಆತು ಅತ್ತು ನನ್ನ ಕಣ್ಣಲ್ಲೂ ನೀರು
ಢಂ ಢಮಾರ್ ಸದ್ದು
ಭಯವಾವರಿಸಿ ಅವಳ ಬಿಗಿದಪ್ಪುತ್ತೇನೆ
ಹಣೆಗೊಂದು ಮುತ್ತು
ದಿಕ್ಕುಗಾಣದ ತಾಯಿ ಮಗುವ ಮುದ್ದಿಸಿದಂತೆ
ಸುತ್ತ ಕಣ್ಣಾಡಿಸುತ್ತಾಳೆ ದಾರಿ ಹುಡುಕುವವಳಂತೆ
ಇಲ್ಲ,ಸುತ್ತೆಲ್ಲೂ ದಾರಿಯೇ ಇಲ್ಲ

ನನ್ನ ಮನೆ ಹುಡುಕಿಕೊಡೆಂದು
ಹಠ ಮಾಡುತ್ತೇನೆ
‘ನೋಡಿಲ್ಲಿ, ದಾರಿಯೇ ಇಲ್ಲ
ಎಲ್ಲೆಡೆ ಜಲವಾವರಿಸಿದೆ
ಮುನ್ನಡೆದೆಯೋ ತೇಲಿಹೋಗುತ್ತೀಯ
ಇಲ್ಲ ಸುಟ್ಟುಬಿಡುತ್ತಾರೆ
ಇಲ್ಲಿಯೇ ನಿಲ್ಲೋಣ, ನಾನಿದ್ದೇನೆ ನಿನ್ನೊಡನೆ’
ಅಳುತ್ತಳುತ್ತಲೆ ನಗುತ್ತಾಳೆ
ಹಸಿರುಬಣ್ಣದ ಸೀರೆಗೀಗ
ಇನ್ನೆರಡು ಬಣ್ಣಗಳ ಹೊಳಪು ಸೇರಿ
ಕೇಸರಿ ಬಿಳಿ ಹಸಿರು!!!


ಅವಳಾರಂತ ಅರಿವಾಯಿತು
ಬಿಗಿಬಿಗಿದಪ್ಪಿ ಬಿಕ್ಕುತ್ತೇನೆ
‘ನಿನಗೆ ಸಿಕ್ಕಿದ ಸ್ವಾತಂತ್ಯವ
ನಾವು ಉಳಿಸಕೊಳ್ಳಲೇ ಇಲ್ಲ,
ನಮಗದು ದಕ್ಕಲೇ ಇಲ್ಲ’

ಕಣ್ದೆರೆವಷ್ಟರಲ್ಲಿ ಅವಳಿಲ್ಲ
ಅವಳ ಹುಡುಕಿದ ಕಣ್ಣೊಳಗೆ
ನೂರು ಬಣ್ಣ ನೀರಾಗಿ ಹರಿದು
ಕಣ್ಣುಜ್ಜಿದರೆ ಮೂರು ಬಣ್ಣಗಳ
ಶುಭಾಶಯ ಹಿಡಿದು ನಗುವ ನೂರು ಮನಸುಗಳು
ನಕ್ಕ ನಯನಗಳೆಲ್ಲ ಅರಳಿ ಹೂವು
ಮತ್ತೆ ಕನಸುಗಳನೆಲ್ಲ ನೆನಪ ದಾರದಿ ಕಟ್ಟಿ
ಮಾಲೆ ಮಾಡಿ ಅವಳಿಗೆ ಮುಡಿಸ ಹೊರಟಿದ್ದೇನೆ
ಹರಿದು ಹೋದವಳ ಸೀರೆಗೆ ತೇಪೆಹಾಕಲು
ಯಾವ ಅಂಗಡಿಯಲ್ಲಿ ಸಿಗಬಹುದು ನೂಲು?
Categories: ಕನ್ನಡ ಪುಟಗಳು

ಬತ್ತಿದ ಬೆಳದಿಂಗಳು ಹರವಿಕೊಳದು

Thu, 2008-07-17 21:01
ಪ್ರೀತಿಯ ನೀವುಗಳೆ....


ಬರೆಯಲು ಬೇಜಾರಾಗಿದೆ. ಬರೆಯಬೇಕು ಅನಿಸುತ್ತಿಲ್ಲ. ಬ್ಲಾಗ್ ಬರವಣಿಗೆಯಿಂದ ದೂರವಿರಬೇಕು ಎನಿಸುತ್ತಿದೆ.
ಸೋರಿಚೆಲ್ಲುತ್ತಿರುವ ಈ ನೆನಪು ಕನಸುಗಳನ್ನೆಲ್ಲ ನಿಮಗೆಲ್ಲ ಹೇಳದೆಲೆ ಒರೆಸಿಬಿಡಲು ಮನಸಾಗಲಿಲ್ಲ. ಹಿಡಿದಿಡುವ ಮನಸೂ ಇಲ್ಲ.

ತನ್ನಿಷ್ಟದ ಎಲ್ಲ ಬ್ಲಾಗುಗಳಿಗೆ ಭೇಟಿ ನೀಡುವುದನ್ನಿವಳು ಬಿಡಲಾರಳು, ಎಲ್ಲಿಯಾದರೂ ಇವಳದೊಂದು ಹೆಜ್ಜೆಗುರುತು ಕಂಡೀತು ನಿಮಗೆ.

"ನಾಳೆ ಮಂಗಳವಾರ, ಮಾರನೆಯ ದಿನ ನವಮಿ, ಆಮೇಲೆ ನಿಲ್ಲುವೆನೆ ನಾನು ಇಲ್ಲಿ?"

ಶುಕ್ರವಾರ ಬರಲಿರುವ ಹುಣ್ಣಿಮೆಯಿರುಳಿನ ಬೆಳದಿಂಗಳ ಜಾತ್ರೆಯಲಿ ನೆನಪು ಕನಸುಗಳನೆಲ್ಲ ತೂರಿಬಿಡುತ್ತಿದ್ದೇನೆ. ಇನ್ನಿಲ್ಲಿ ಯಾವ ನೆನಪು ಕನಸು, ಬೆಳದಿಂಗಳು, ಹುಣ್ಣಿಮೆಗಳ ಹಿಡಿದು ತಂದು ಹರಿಸುವ ಯೋಚನೆಯಿಲ್ಲ.

ಪ್ರಿಯ ಓದುಗ...

"ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು"



ನನ್ನ ಬರಹಗಳನ್ನ ಬೆನ್ನುತಟ್ಟಿ, ಕಮೆಂಟಿಸಿ, ಓದಿ , ಕೈ ಹಿಡಿದು ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಒಂದಿಷ್ಟು ಪ್ರೀತಿ.

ಹೋಗಿ ಬರುತ್ತೇನೆನ್ನುವಾಗ ಮತ್ತೆದೇ ಹಾಡು "ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ"


ನಿಮ್ಮೆಲ್ಲರ
-ಶಾಂತಲಾ ಭಂಡಿ.
Categories: ಕನ್ನಡ ಪುಟಗಳು

ನೀಲ ಬೆಳದಿಂಗಳು

Mon, 2008-07-14 00:42
ಬೊಗಸೆಯಲ್ಲಿ ಬೆಳದಿಂಗಳು
(ಪ್ರೀತಿಯ ಲೇಖಕರಿಗೆ ಹಾಗೂ ಸ್ಪೂರ್ತಿ ತಂದ ಅವರ ಬರಹಕ್ಕಿದೋ ಅರ್ಪಣೆ ಈ ಸಾಲುಗಳು)

ಬೆಳದಿಂಗಳಂಗಳ
ಪ್ರೀತಿ ಚಂದಮಾಮ
ಶ್ರಾವಣಕೆ ಕಾಯುವ ಆಷಾಢ
ಪ್ರೀತಿಮೋಡ ಸುರಿದು
ಮಳೆಯಾಗುವುದು ಎಂದು

ಮಲೆನಾಡ ಮುಂಗಾರು
ಹಾಡಿದರೆ ಅವನು
ಎಲ್ಲ ಹಾಡುಗಾರನ ಹಿಂದೆ
ಅವಳ ಕಣ್ಣೊಳಗೆ ಮಾತ್ರ
ಹಾಡ ಬರೆದವನೆ ಬರೆದದ್ದು
ಮಳೆಯ ಚಿತ್ರ
ಮೊದಮೊದಲಿಗೆ
ಅವನ ಬೊಗಸೆಯಲ್ಲಿ ಅವಳೇ ಮಳೆ

ಅವಳು ಬೆಳದಿಂಗಳು
ಅವನು ಬೆಳ್ಳಿತೆರೆಯಲ್ಲವಳ
ಬೆರಳಿಡಿದು ನಡೆಸುವನು
ಸಂಕವೊಂದರ ಮೇಲೆ ಜಾತ್ರೆಯೂ ನಡೆದು
ಮೋಡಗಳ ಸುತ್ತೆಲ್ಲ ಅವನದೇ ಪರಿಮಳ
ಹಾಲ್ಟಿಂಗ್ ಬಸ್ಸಲ್ಲೂ ದೀಪಗಳುರಿದು
ಅವಳ ಮನವೀಗ ದೀಪಾವಳಿ

ಮೂಡಣದಿಂದ ಪಡುವಣಕೆ
ಓಲೆಯೊಂದು ರವಾನೆಯಾಗಿ
ಬಿಂಬಗಳ ತೋಟದಲಿ ಪುಟ್ಟ ಕನ್ನಡಿಯೊಂದು
ಪುಟ್ಟ ಕನ್ನಡಿಯಲ್ಲೂ ಯಕ್ಷರು
ಗೆಳೆಯನಿಗಾಗಿ ಹೆಣೆದ ಕನಕಾಂಬರ ದಂಡೆ
ಉಳಿದರ್ಧ ಹೂವು ಎಲ್ಲಿದೆ?
ಆ ದೊಡ್ಡದೇವನಿಗೆ ಇವಳೇ ಪುಟ್ಟ ಹೂ

ರಾತ್ರಿಯ ಹೆದ್ದಾರಿಯಲ್ಲಿ ಫುಲ್ ಸ್ಟಾಪು.
ಎರಡೇ ನಿಮಿಷಗಳ ಮೌನದಲ್ಲು
ಬೆಳದಿಂಗಳು ಚುರುಗುಟ್ಟಿ
ಯಾರದೋ ಕನಸಿನಲ್ಲಿ ಯಾರೋ ಊಳಿಗ
ಕತ್ತಲ ಸಮುದ್ರದಲ್ಲೂ ಮೋಂಬತ್ತಿಗಳುರಿದು
ರಾತ್ರಿಯೇ ಹೇಳುವುದು ನಾನೇನು ಕನಸು ಕಂಡೆನೆಂದು

ಒಡಲ ನೂಲಿನ ಜಾಲ
ಹಳೇ ಉಡುಪಿನ ನೃತ್ಯ
ಮೌನ ಕಲಿಸಿದ ಕಾಗುಣಿತ
ಎದೆಯೊಳಗಿನ ಸಸಿಯಾಗಿ
ಅದೇ ದೈನಿಕ ಆದರದೇ ಸುಖ

ಅಗೋ ಪ್ರಾರ್ಥನೆಯ ಕರೆ
ಸುಮ್ಮನಿರು ಗೆಳೆಯ ಸಂಗೀತ ಕೇಳೋಣ
ಮಾತಿರದ ನಲುಮೆಯಲಿ
ಒಂದು ಹಾಡು ಕೊಟ್ಟರೂ ಸಾಕು
ತೀರದಲಿ ತೋಯುವನು ನನ್ನ ಹುಡುಗ
ನೀಲಿಯೊಳಗೂ ಇಹುದು ಹಿತದ ಹಾಡು
ನೀರವದಲ್ಲೂ ಝೇಂಕಾರ
ಅವಶೇಷಗಳ ನಡುವೆಯೂ ಪ್ರತಿಧ್ವನಿ.
ಹಾಡಿದಷ್ಟೂ ರಾತ್ರಿ ಚಿಕ್ಕದೆನ್ನಿಸುವಾಗ
ಹಿಂಬಾಗಿಲನು ಯಾರೋ ತೆರೆದ ಸದ್ದು

ನೆಳಲು ಬೆಳಕಿಗೂ ಆಟ
ಹಳಿಗಳತ್ತ ನೋಡಲ್ಲಿ ಪುಷ್ಪಕ ವಿಮಾನ
ಸಾಗರದಿಯೂ ನೆನೆಯದ ಕಾಗದದ ದೋಣಿ
ನಾವೆಯಲ್ಲೆ ಒರಗಿದ ನಾವಿಕನಿಗೀಗ
ಶಾಪ ವಿಮೋಚನೆಯ ಸ್ಪರ್ಶ


ತೋಟದಂಚಿನ ಮೂಕಮರ ಏನನ್ನು ಹೇಳೀತು?
ದೋಸ್ತಾ ಕಣ್ಣು ತಪ್ಪಿಸಬೇಡ ಅಂತಲೇನು?
ಅಲ್ಲಿಹುದು ನಿಮ್ಮ ಮನೆ
ಅದೇ ಊರಿನ ಕಡೆ ಅಂತಲೂ ಇಹುದಾ?
ಹರಕು ನೋಟಿನಂತೆ ಮರಳಿ ಹೊರಟು ನಿಂತಾಗ
ಅವನ ಮುಖದಲ್ಲೂ ಈಗ ಸಮಯದ ಹರಿವು


ಮುಂಗಾರಿರುಳಿನಲಿ ಬೆಳದಿಂಗಳು
ತರಗೆಲೆ ಹೆಕ್ಕುವಾಗ
ಚಂದಮಾಮ ಹಸಿರೆಲೆ ಹರವುತ್ತಾನೆ
ಬೆಳದಿಂಗಳಲ್ಲಿ ಸುಳುಸುಳುಗಾಳಿ
ಮತ್ತದೇ ಸುಳು ಸುಳು ಗಾಳಿ
ಬೊಗಸೆಯೊಡ್ಡಿ ನಿಲ್ಲುತ್ತಾಳೆ ಅವನ ಮುಂದೆ
ಇದೀಗ ಅವಳ
ಬೊಗಸೆಗಣ್ಣು ಬೆಳದಿಂಗಳು
ಅವಳ ಬೊಗಸೆಯಲ್ಲೂ ಮಳೆ
Categories: ಕನ್ನಡ ಪುಟಗಳು

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator